Home News ಭಾಷೆಯನ್ನು ಪ್ರೀತಿಸಬೇಕು

ಭಾಷೆಯನ್ನು ಪ್ರೀತಿಸಬೇಕು

0

ಯಾವುದೇ ಒಂದು ಭಾಷೆ ಉಳಿಯಬೇಕು ಹಾಗು ಬೆಳೆಯಬೇಕು ಎಂದರೆ ಆ ಭಾಷೆಯನ್ನು ಸದಾ ಕಾಲ ಬಳಸಬೇಕು. ಮನದಾಳದಿಂದ ಪ್ರೀತಿಸಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಪಾ.ಮು.ಚಲಪತಿಗೌಡ ತಿಳಿಸಿದರು.
ನಗರದ ಅರಳೇಪೇಟೆಯಲ್ಲಿರುವ ಶಿಕ್ಷಕ ವೇಣುಗೋಪಾಲ್ರ ಮನೆಯಲ್ಲಿ ಶನಿವಾರ ಸಂಜೆ ತಾಲ್ಲೂಕು ವಚನ ಸಾಹಿತ್ಯ ಪರಿಷತ್ತು ಹಾಗು ಚುಟುಕು ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮನೆಯಂಗಳದಲ್ಲಿ ವಚನ ಸಾಹಿತ್ಯ ಸಿಂಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗಡಿನಾಡು ಪ್ರದೇಶದಲ್ಲಿರುವ ನಮಗೆ ತೆಲುಗು ಭಾಷೆಯು ಪ್ರಭಾವಿಸುವಂತೆ, ಕನ್ನಡ ಭಾಷೆಯು ತೆಲುಗರನ್ನು ಪ್ರಭಾವಿಸುವ ರೀತಿಯಲ್ಲಿ ನಾವು ಕನ್ನಡವನ್ನು ಪ್ರೀತಿಯಿಂದ, ಅಭಿಮಾನಪೂರ್ವಕವಾಗಿ ಬಳಸಬೇಕು. ಭಾಷೆಯನ್ನು ಹೆಚ್ಚು ಹೆಚ್ಚು ಬಳಸುವುದರಿಂದ ಮಾತ್ರವೇ ಉಳಿಯಬಲ್ಲದು ಎಂದರು.
ಕನ್ನಡ ಭಾಷೆಗೆ ಬಹಳ ಪುರಾತನವಾದ ಹಿನ್ನೆಲೆಯಿದೆ, ದೇಶಕ್ಕೆ ಅನೇಕ ಮಂದಿ ದಿಗ್ಗಜರನ್ನು ಕೊಡುಗೆಯಾಗಿ ನೀಡಿರುವಂತಹ ನಾಡಿನಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಿ ಎಂದು ಹೇಳುವ ನಾವೇ ನಮ್ಮ ಮಾತೃಭಾಷೆಯಾದ ಕನ್ನಡವನ್ನು ಕಡೆಗಣಿಸುತ್ತಿದ್ದೇವೆ. ಮಕ್ಕಳು ಅನ್ಯ ಭಾಷೆಗಳನ್ನು ಕಲಿಯಲಿ ಆದರೆ ಮಾತೃಭಾಷೆಯನ್ನು ಹೆಚ್ಚು ಮಾತಾಡುವ ಆಸಕ್ತಿಯನ್ನು ಪೋಷಕರೂ ಸೇರಿದಂತೆ ಶಿಕ್ಷಕರು ಮೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಪಾ.ಮು.ಚಲಪತಿಗೌಡ ಚುಟುಕುಗಳನ್ನು ವಾಚಿಸಿದರೆ ಕವಿತ, ಸುಂದರಾಚಾರಿ, ಶ್ಯಾಮಸುಂದರ್ ಹಾಗೂ ಹಲವಾರು ಮಕ್ಕಳು ಕವಿತೆಗಳನ್ನು ವಾಚಿಸಿದರು.
ಕನ್ನಡ ಸಾರಸ್ವತ ಪರಿಚಾರಿಕೆ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್, ವಚನ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಕಾರ್ಯದರ್ಶಿ ಸಿ.ಎ.ದೇವರಾಜ್, ತಾಲ್ಲೂಕು ಅಧ್ಯಕ್ಷ ನಾರಾಯಣಸ್ವಾಮಿ, ಚುಸಪ ತಾಲ್ಲೂಕು ಘಟಕದ ಅಧ್ಯಕ್ಷ ಈಧರೆ ಪ್ರಕಾಶ್, ಲಕ್ಮಿನಾರಾಯಣ(ಲಚ್ಚಿ), ಸುಂದರಾಚಾರಿ, ಶಿಕ್ಷಕರಾದ ವೇಣುಗೋಪಾಲ್ ಹಾಜರಿದ್ದರು.