ಸಂಘ ಸಂಸ್ಥೆಗಳು, ಶಿಕ್ಷಣ ಕ್ಷೇತ್ರದ ಕಡೆಗೆ ಹೆಚ್ಚಿನ ಆದ್ಯತೆ ನೀಡಿದರೆ, ಸಮಾಜದಲ್ಲಿ ಉತ್ತಮ ಪರಿವರ್ತನೆ ತರಲು ಸಾಧ್ಯವಾಗುತ್ತದೆ ಎಂದು ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನ ಆನಂದ್ ಹೇಳಿದರು.
ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಮಕ್ಕಳಿಗೆ ಟ್ರಸ್ಟ್ ನ ವತಿಯಿಂದ ಉಚಿತವಾಗಿ ಬೆಳಗಿನ ಉಪಹಾರ, ಹಾಲು, ಬಿಸ್ಕತ್ ವಿತರಣೆಯ ಕುರಿತು ಶನಿವಾರ ಅವರು ಮಾತನಾಡಿದರು.
ತೀವ್ರ ಬರಗಾಲಕ್ಕೆ ತುತ್ತಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಬಹುತೇಕ ಕುಟುಂಬಗಳಲ್ಲಿ ಪೌಷ್ಟಿಕವಾದ ಆಹಾರ ಸಿಗುವುದು ಕಷ್ಟಕರವಾಗಿದೆ, ಸರ್ಕಾರ ಮಧ್ಯಾಹ್ನ ಬಿಸಿಯೂಟ ನೀಡಿದರೂ, ಎಷ್ಟೋ ಮಂದಿ ವಿದ್ಯಾರ್ಥಿಗಳು ಬೆಳಗಿನ ಸಮಯದಲ್ಲಿ ಉಪಹಾರವಿಲ್ಲದೆ ಶಾಲೆಗಳಿಗೆ ಬರುವವರಿದ್ದಾರೆ. ಖಾಲಿ ಹೊಟ್ಟೆಯಲ್ಲಿ ಕಲಿಯುವುದು ಕಷ್ಟಕರವಾಗಿದೆ. ಇದೇ ಕಾರಣಕ್ಕಾಗಿ ಮಕ್ಕಳು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಶಾಲೆಗಳಲ್ಲಿ ಕೊಡುವ ಶಿಕ್ಷಣ ಎಷ್ಟು ಪ್ರಾಮುಖ್ಯವೋ ಮಕ್ಕಳ ಆರೋಗ್ಯಗಳು ಸುಧಾರಣೆ ಮಾಡುವುದು ಅಷ್ಟೆ ಮುಖ್ಯವಾಗುತ್ತದೆ, ಇದರಿಂದ ಮುಂದಿನ ದಿನಗಳಲ್ಲಿ ಅಪೌಷ್ಟಿಕತೆಯನ್ನು ನಿವಾರಣೆ ಮಾಡಿ, ಆರೋಗ್ಯವಂತ ಪ್ರಜೆಗಳನ್ನು ನಾವು ಸಮಾಜಕ್ಕೆ ಕೊಡುಗೆಯಾಗಿ ನೀಡಿದಂತಾಗುತ್ತದೆ. ಆದ್ದರಿಂದ ಟ್ರಸ್ಟ್ ಗಳು, ಸಮಾಜಮುಖಿಯಾಗಿ ಕೆಲಸ ಮಾಡುವಂತಹ ಸಂಘ ಸಂಸ್ಥೆಗಳು ಇಂತಹ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದರು.
ಮುಖ್ಯಶಿಕ್ಷಕ ಎಂ.ಎನ್. ನರಸಿಂಹಮೂರ್ತಿ ಮಾತನಾಡಿ, ಮಕ್ಕಳು ಉತ್ತಮವಾಗಿ ಕಲಿಯಬೇಕಾದರೆ ಅವರ ಆರೋಗ್ಯ ಸುಧಾರಣೆ ಬಹಳ ಮುಖ್ಯವಾಗುತ್ತದೆ. ಅವರು ಆರೋಗ್ಯವಾಗಿದ್ದರೆ ಮಾತ್ರ ಶಿಸ್ತು, ಏಕಾಗ್ರತೆ, ಕಲಿಯುವಂತಹ ಮನಸ್ಸು, ಸ್ಥಿರವಾಗಿರಲು ಸಾಧ್ಯವಾಗುತ್ತದೆ, ಗ್ರಾಮೀಣ ಪ್ರದೇಶಗಳಿಂದ ಬರುವಂತಹ ಮಕ್ಕಳಿಗೆ ಇರುವ ಕೊರತೆಯನ್ನು ಅರಿತು, ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನವರು ಮಕ್ಕಳಿಗೆ ವರ್ಷ ಪೂರ್ತಿ ಬೆಳಗಿನ ಉಪಹಾರ ನೀಡಲು ಮುಂದೆ ಬಂದಿರುವುದು ಶ್ಲಾಘನೀಯವಾದ ವಿಚಾರವಾಗಿದೆ, ಇಂತಹ ಸೌಕರ್ಯಗಳು ಎಲ್ಲಾ ಶಾಲೆಗಳ ಮಕ್ಕಳಿಗೆ ಲಭಿಸಬೇಕು ಎಂದರು.
ಟ್ರಸ್ಟ್ ನ ಪದಾಧಿಕಾರಿಗಳಾದ ಜಯಪ್ರಕಾಶ್, ಪ್ರಭಾಕರ್, ರಾಜಶೇಖರ್, ಶಿಕ್ಷಕರಾದ ವೀರಭದ್ರಪ್ಪ, ವಿ.ವೆಂಕಟೇಶ್, ರಮೇಶ್, ಯು.ಪಿ.ನರಸಿಂಹಮೂರ್ತಿರಾವ್, ರಾಮಾಂಜಿನಪ್ಪ, ಮುನಿಕೃಷ್ಣಪ್ಪ ಹಾಜರಿದ್ದರು.
- Advertisement -
- Advertisement -
- Advertisement -