Home News ಮಕ್ಕಳು ಸನ್ನಡತೆಯನ್ನು ಕಲಿತು ಮಾದರಿಯಾಗಿ

ಮಕ್ಕಳು ಸನ್ನಡತೆಯನ್ನು ಕಲಿತು ಮಾದರಿಯಾಗಿ

0

ಇಂದಿನ ಮಕ್ಕಳು ದೇಶದ ಭವಿಷ್ಯ. ಮಕ್ಕಳು ಸನ್ನಡತೆಯನ್ನು ಕಲಿತು ದೇಶ ಪ್ರಗತಿ ಪಥದಲ್ಲಿ ಸಾಗಲು ಕಾರಣಕರ್ತರಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಕನ್ನಡ ಸಾಹಿತ್ಯ ಪರಿಷತ್‌, ಶಾಲೆಯ ಸಹಯೋಗದಲ್ಲಿ ಆಚರಿಸಿದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳನ್ನು ಪ್ರೀತಿ, ಅಭಿಮಾನದಿಂದ ನೋಡುವ ಮೂಲಕ ಅವರ ವರ್ತನೆಯಲ್ಲಿ ಬದಲಾವಣೆ ತರಬಹುದು. ಅವರ ಅಭಿರುಚಿಗೆ ಅನುಗುಣವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತೇಜನ ನೀಡಬೇಕು. ವಿಶ್ವದಾದ್ಯಂತ ಮಕ್ಕಳ ದಿನಾಚರಣೆಯನ್ನು ನವೆಂಬರ್ ೨೦ರಂದು ಆಚರಿಸುತ್ತಾರೆ. ಆದರೆ ಭಾರತದಲ್ಲಿ ಜವಾಹರ್‌ಲಾಲ್ ನೆಹರುರವರ ಹುಟ್ಟುಹಬ್ಬದಂದು ಅಂದರೆ ನವೆಂಬರ್ ೧೪ರಂದು ಆಚರಿಸಲಾಗುತ್ತದೆ. ಅದಕ್ಕೆ ಕಾರಣ ಚಾಚಾ ನೆಹರೂರವರ ಮಕ್ಕಳ ಪ್ರೇಮ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ನಡೆಸುತ್ತಿರುವ ಕಾರ್ಯಕ್ರಮಗಳು, ಶಾಲಾ ಗ್ರಂಥಾಲಯಕ್ಕೆ ನೀಡುತ್ತಿರುವ ಪುಸ್ತಕಗಳು ಮತ್ತು ಅದರ ಪರಿಣಾಮಗಳ ಬಗ್ಗೆ ವಿವರಿಸಿದರು.
ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ನಾಟಕ ನಡೆಯಿತು. ಕೆಲವು ಮಕ್ಕಳು ನೆಹರು ಅವರ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಮತ್ತು ಶಾಲೆಯ ಗ್ರಂಥಾಲಯಕ್ಕೆ ಕಸಾಪ ತಾಲ್ಲೂಕು ಘಟಕದ ವತಿಯಿಂದ ಪುಸ್ತಕಗಳನ್ನು ನೀಡಲಾಯಿತು. ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಶಾಲಾ ವಿದ್ಯಾರ್ಥಿಗಳು ಅಣಕು ಮಂತ್ರಿಮಂಡಲವನ್ನು ರಚಿಸಿ, ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.
ಕಸಾಪ ತಾಲ್ಲೂಕು ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌, ಉಪಾಧ್ಯಕ್ಷ ಸಿ.ಪಿ.ಈ.ಕರಗಪ್ಪ, ಮುಖ್ಯಶಿಕ್ಷಕಿ ವೆಂಕಟರತ್ನಮ್ಮ, ಸಿ.ಆರ್‌.ಪಿ. ನಾಗರಾಜ್‌, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪಾ ರಾಮಚಂದ್ರ, ಶಿಕ್ಷಕರಾದ ಚಾಂದ್‌ಪಾಷ, ಅಶೋಕ್‌, ಭಾರತಿ ಮತ್ತಿತರರು ಹಾಜರಿದ್ದರು.