Home News “ಮಕ್ಕಳ ಗ್ರಾಮಸಭೆಯಲ್ಲಿ” ವಿದ್ಯಾರ್ಥಿಗಳಿಂದ ಸಮಸ್ಯೆಗಳ ಅನಾವರಣ

“ಮಕ್ಕಳ ಗ್ರಾಮಸಭೆಯಲ್ಲಿ” ವಿದ್ಯಾರ್ಥಿಗಳಿಂದ ಸಮಸ್ಯೆಗಳ ಅನಾವರಣ

0

ತಾಲ್ಲೂಕಿನ ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಗ್ರಾಮಾಂತರ ಟ್ರಸ್ಟ್, ಸಿ.ಎಂ.ಸಿ.ಎ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಡೆದ “ಮಕ್ಕಳ ಗ್ರಾಮಸಭೆಯಲ್ಲಿ” ವಿದ್ಯಾರ್ಥಿಗಳು ತಮ್ಮ ಶಾಲೆ ಹಾಗೂ ಗ್ರಾಮದ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳು ಮಾತನಾಡಿದರು.
ಶಾಲೆಗಳ ಬಳಿ ವಾಹನ ಸಂಚಾರ ಹೆಚ್ಚಿದ್ದು, ರಸ್ತೆ ಉಬ್ಬುಗಳನ್ನು ಮತ್ತು ಫಲಕವನ್ನು ಹಾಕಿಸಿ, ಶಾಲೆಗೆ ಗ್ರಂಥಾಲಯ ಬೇಕು, ಪತ್ರಿಕೆಗಳನ್ನು ತರಿಸಬೇಕು, ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಗ್ರಾಮದಲ್ಲಿ ಕಸ ಹಾಕಲು ಸಿಮೆಂಟ್ ತೊಟ್ಟಿಗಳನ್ನು ಇರಿಸಿ, ಶಾಲೆಯ ಶೌಚಾಲಯ ದುರಸ್ತಿ ಮಾಡಿಸಿ, ಶಾಲಾ ವಿದ್ಯಾರ್ಥಿಗಳು ದ್ವಿಚಕ್ರ ವಾಹನ ತರುವುದಕ್ಕೆ ಕಡಿವಾಣ ಹಾಕಿ ಮುಂತಾದ ಸಮಸ್ಯೆಗಳನ್ನು ವಿದ್ಯಾರ್ಥಿಗಳು ವಿವರಿಸಿದರು.
ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಡಶಾಲೆಯ ಸಿ.ನಿಖಿತಾ ಮಾತನಾಡಿ, “ನಮ್ಮ ಗ್ರಾಮದಲ್ಲಿ ಮನೆಗಳ ಪಕ್ಕದಲ್ಲಿ ತಿಪ್ಪೆಗಳನ್ನು ಹಾಕಿರುವುದುದರಿಂದ ಖಾಯಿಲೆಗಳು ಬರುತ್ತಿವೆ. ಚರಂಡಿ ವ್ಯವಸ್ಥೆಯಿಲ್ಲದೆ ಮನೆಗಳ ಬಳಿ ನೀರು ನಿಲ್ಲುತ್ತಿದೆ’ ಎಂದು ಸಮಸ್ಯೆಗಳನ್ನು ವಿವರಿಸಿದರೆ, ಕಾಚಹಳ್ಳಿಯ ಭೂಮಿಕಾ, “ನೀರಿನ ಮೂಲಕ ಹಲವು ಖಾಯಿಲೆಗಳು ಬರುತ್ತಿವೆ. ಹಾಗಾಗಿ ನಮ್ಮ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಿ ಎಂದಳು. ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಮೃತ, ರಸ್ತೆ ಉಬ್ಬಿನ ಬಗ್ಗೆ ಪ್ರಸ್ತಾಪಿಸಿದರೆ, ಮುತ್ತೂರು ಶಾಲೆಯ ತೇಜಸ್ವಿನಿ ಓದಲು ಗ್ರಂಥಾಲಯದ ಅನುಕೂಲ ಮಾಡಿಕೊಡುವಂತೆ ವಿನಂತಿಸಿದಳು. ಮುತ್ತೂರಿನ ಋತ್ವಿಕಾ, ನಮಗೆ ಆಡಲು ಮೈದಾನವಿಲ್ಲ, ಗ್ರಾಮದಲ್ಲಿ ಕಸ ಹಾಕಲು ಸಿಮೆಂಟ್ ತೊಟ್ಟಿಗಳನ್ನು ಇಡಬೇಕೆಂದರೆ, ಮಳ್ಳೂರು ಶಾಲೆಯ ಅಕ್ಷಯ, ಶಾಲೆಯ ಆವರಣದಲ್ಲಿ ಜನರು ಕಸ ಹಾಕುತ್ತಾರೆಂದು ದೂರಿದರು.
ಮಕ್ಕಳ ಅಭಿವೃದ್ಧಿ ಅಧಿಕಾರಿ ಗೋಪಾಲ್ ಮಾತನಾಡಿ, “ಮಕ್ಕಳ ಮನಸ್ಸಿನಲ್ಲಿ ಕಲ್ಮಶವಿರುವುದಿಲ್ಲ. ಅವರು ತಮ್ಮ ಅನುಭವಕ್ಕೆ ಬಂದುದನ್ನೇ ವ್ಯಕ್ತಪಡಿಸುತ್ತಾರೆ. ಅವರ ಸಮಸ್ಯೆಗಳನ್ನು ಪರಿಹರಿಸಬೇಕಾದ್ದು ನಮ್ಮ ಕರ್ತವ್ಯ. ಮಕ್ಕಳು ತಿಳಿಸಿದ ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಸಾರ್ವಜನಿಕರು ಕೂಡ ಸಹಕರಿಸಬೇಕು. ಸ್ವಚ್ಛತೆಗೆ ಆದ್ಯತೆಯನ್ನು ನೀಡಬೇಕು. ನಮ್ಮ ಗ್ರಾಮ ಎಂಬ ಮನೋಭಾವ ಬಂದರೆ ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗಬಹುದು” ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಶಿವಕುಮಾರ್, ಉಪಾಧ್ಯಕ್ಷ ಗೋಪಾಲಪ್ಪ, ಅಭಿವೃದ್ಧಿ ಅಧಿಕಾರಿ ಎಂ.ಮಂಜುನಾಥ, ಟಿ.ಎಂ.ಬೈರೇಗೌಡ, ತ್ರಿವೇಣಿ, ಕೆ.ಶ್ರೀಧರ್, ಮುಖ್ಯಶಿಕ್ಷಕಿ ಶಕುಂತಲಮ್ಮ, ಎಂ.ರಘು, ನಾಗಮಣಿ, ಗ್ರಾಮಾಂತರ ಟ್ರಸ್ಟ್ ನ ಉಷಾಶೆಟ್ಟಿ, ಅನಂತಲಕ್ಷ್ಮಿ ಹಾಜರಿದ್ದರು.

error: Content is protected !!