Home News ಮಕ್ಕಳ ಸರ್ವಾಂಗೀಣ ಬೆಳವಣಿಗೆ ಪ್ರಾರಂಭವಾಗುವುದು ಅಂಗನವಾಡಿಯಿಂದ

ಮಕ್ಕಳ ಸರ್ವಾಂಗೀಣ ಬೆಳವಣಿಗೆ ಪ್ರಾರಂಭವಾಗುವುದು ಅಂಗನವಾಡಿಯಿಂದ

0

ಮಕ್ಕಳ ಆರೋಗ್ಯ ಮತ್ತು ಬುದ್ದಿಯ ವಿಕಸನಕ್ಕೆ ಅಂಗನವಾಡಿ ಕೇಂದ್ರಗಳ ಪಾತ್ರ ಮಹತ್ವದ್ದಾಗಿದೆ ಎಂದು ಶಾಸಕ ಎಂ.ರಾಜಣ್ಣ ಹೇಳಿದರು.
ತಾಲ್ಲೂಕಿನ ಅಬ್ಲೂಡು ಗ್ರಾಮದಲ್ಲಿ ಗುರುವಾರ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯಿತಿ ಹಾಗು ಶಿಶು ಅಭಿವೃದ್ದಿ ಇಲಾಖೆ ಸಹಯೋಗದಲ್ಲಿ ನೂತನವಾಗಿ ನಿರ್ಮಿಸಲಾದ ಅಂಗನವಾಡಿ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಅಂಗನವಾಡಿ ಕೇಂದ್ರದಿಂದಲೇ ಮಕ್ಕಳ ಸರ್ವಾಂಗೀಣ ಬೆಳವಣಿಗೆ ಆರಂಭವಾಗುತ್ತದೆ. ಪ್ರತಿಯೊಂದು ಮಗುವೂ ಆರೋಗ್ಯದಿಂದಿರಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರ ಅಂಗನವಾಡಿಗಳ ಮೂಲಕ ಪೌಷ್ಠಿಕ ಆಹಾರವನ್ನೂ ಪೂರೈಸುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರೂ ಸೇರಿದಂತೆ ಶಿಶು ಅಭಿವೃದ್ದಿ ಅಧಿಕಾರಿಗಳು ತಾಲ್ಲೂಕಿನಾಧ್ಯಂತ ಇರುವ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು.
ಶಿಶು ಅಭಿವೃದ್ದಿ ಅಧಿಕಾರಿ ಲಕ್ಷೀದೇವಮ್ಮ ಮಾತನಾಡಿ, ಸರ್ಕಾರ ಮಾತೃಪೂರ್ಣ ಯೋಜನೆಯನ್ನು ಜಾರಿ ಮಾಡಿದ್ದು ಸರ್ಕಾರದ ಆದೇಶದಂತೆ ಪ್ರತಿನಿತ್ಯ ಮದ್ಯಾಹ್ನ ಗರ್ಭಿಣಿಯರಿಗೆ ಮೊಟ್ಟೆ, ಹಾಲು ಅನ್ನ ಸಾರು ಪೌಷ್ಟಿಕ ಆಹಾರವನ್ನು ನೀಡಲಾಗುತ್ತಿದೆ. ಯೋಜನೆಯನ್ನು ಗ್ರಾಮೀಣ ಪ್ರದೇಶದ ಮಹಿಳೆಯರು ಸದುಪಯೋಗಪಡಿಸಿಕೊಳ್ಳಿ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯ ಬಂಕ್ ಮುನಿಯಪ್ಪ, ತಾಲ್ಲೂಕು ಪಂಚಾಯ್ತಿ ಸದಸ್ಯ ಕೆ.ಎಂ.ಶ್ರೀನಿವಾಸ್, ಕೆ.ಎಸ್.ಕನಕಪ್ರಸಾದ್, ವೆಂಕಟರೆಡ್ಡಿ, ಚೆನ್ನಕೇಶವ, ಗೋಪಿ, ನಾಗಮಣಿ ದೇವರಾಜ್, ಮುನಿಶಾಮಿ, ಮಂಜುನಾಥ್ ಹಾಜರಿದ್ದರು.