ಕೇವಲ ಐದು ನೂರು ಹಾಗೂ ಒಂದು ಸಾವಿರ ರೂಗಳಿಗೆ ಮತಗಳನ್ನು ಮಾರಿಕೊಳ್ಳುವ ಮೂಲಕ ಭ್ರಷ್ಟರಿಗೆ ಅಧಿಕಾರ ನೀಡಬೇಡಿ. ಹಣ ನೀಡಿ ಗೆದ್ದು ಬಂದವರು ಹಣ ಮಾಡುವುದನ್ನೇ ಕೆಲಸ ಮಾಡಿಕೊಳ್ಳುತ್ತಾರೆ. ಕ್ಷೇತ್ರ ಅಭಿವೃದ್ಧಿ ಕಾಣದಾಗುತ್ತದೆ ಎಂದು ಬಿಎಸ್ಪಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರೊ.ಹರಿರಾಮ್ ತಿಳಿಸಿದರು.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಐದು ವರ್ಷಕ್ಕೊಮ್ಮೆ ಮಾಡುವ ಆಯ್ಕೆಯ ಬಗ್ಗೆ ಮತದಾರರು ಜಾಗೃತರಾಗಬೇಕು. ನಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದ ಜನಪ್ರತಿನಿಧಿ ಅಥವಾ ಸರ್ಕಾರವನ್ನು ಆಯ್ಕೆ ಮಾಡಬಾರದು. ಕಪ್ಪು ಹಣ ತರುವುದಾಗಿ ಚುನಾವಣೆಯ ಸಂದರ್ಭದಲ್ಲಿ ಹೇಳಿದ್ದ ಬಿಜೆಪಿ ನೋಟು ರದ್ದತಿ ಬರೆ ಎಳೆಯಿತು, ಉದ್ಯೋಗ ಸೃಷ್ಟಿ ಭರವಸೆ ಮೂಲೆಗುಂಪಾಗಿದೆ. ರೈತರ ಆತ್ಮಹತ್ಯೆ ಹೆಚ್ಚುತ್ತಿದೆ. ಶ್ರಮಿಕರ ಬೆವರಿನ ಹಣ ಬೃಹತ್ ಕಂಪೆನಿ ಮಾಲೀಕರಿಗೆ ಸಾಲ ನೀಡಿ ಮನ್ನಾ ಮಾಡುವುದರಲ್ಲೇ ಮುಗಿಯುತ್ತಿದೆ. ಸರ್ಕಾರ ರೈತರಿಗೆ ಯಾವುದೇ ಉತ್ತಮ ಯೋಜನೆಗಳನ್ನು ನೀಡುತ್ತಿಲ್ಲ ಎಂದು ಟೀಕಿಸಿದರು.
ಬಿಎಸ್ಪಿ ಪಕ್ಷದ ಮುಖಂಡ ಡಾ.ಶ್ರೀನಿವಾಸ್ ಮಾತನಾಡಿ, ಬಿಎಸ್ಪಿ ಪಕ್ಷ ದಲಿತರ ಪಕ್ಷವಲ್ಲ, ಎಲ್ಲಾ ಸಮುದಾಯದಲ್ಲಿರುವ ಶೋಷಿತರ ಪಕ್ಷ. ಮುಂದಿನ ಚುನಾವಣೆಯಲ್ಲಿ ಪಕ್ಷದಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಬೇಕು. ಪಕ್ಷದಲ್ಲಿ ಮತ ಜಾಗೃತಿಯಾಗಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಜಾತಿಗಳನ್ನು ಒಡೆದು ಆಡಳಿತ ನಡೆಸುತ್ತದೆ. ಬಿಜೆಪಿ ಧರ್ಮಗಳನ್ನು ಇಬ್ಭಾಗ ಮಾಡಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಈ ಎರಡು ಪಕ್ಷಗಳಿಂದರೂ ಹಿಂದುಳಿದವರ ಅಭಿವೃದ್ಧಿ ಆಗುತ್ತಿಲ್ಲ. ಪ್ರತಿ ಯುವಕರು ಪ್ರತಿ ಹಳ್ಳಿ ಹಳ್ಳಿಗಳಿಗೆ ತೆರಳಿ ಪ್ರಜಾಪ್ರಭುತ್ವ ವ್ಯವಸ್ಥೆ, ಮತವನ್ನು ಹಣಕ್ಕೆ ಮಾರಿಕೊಳ್ಳದಂತೆ ಜಾಗೃತಿ ಮೂಡಿಸಬೇಕು. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಸಹ ಪ್ರತಿ ವರ್ಷವೂ ಕೇವಲ ಶೇ.1 ರಷ್ಟು ಸಹ ಅಭಿವೃದ್ಧಿಯಾಗಿಲ್ಲ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಚಲಪತಿ ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಯಾಮೇಗೌಡ ನೇತೃತ್ವದಲ್ಲಿ ಹಲವು ಮಂದಿ ಹಾಗೂ ಬಶೆಟ್ಟಹಳ್ಳಿ ಹೋಬಳಿ ಮತ್ತು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಯುವಕರು, ಮಹಿಳೆಯರು ಬಿಎಸ್ಪಿ ಪಕ್ಷಕ್ಕೆ ಸೇರ್ಪಡೆಯಾದರು.
ಬಿಎಸ್ಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗಪ್ಪ, ಲಕ್ಷ್ಮಿ, ಜನಾರ್ಧನ್, ಮೂರ್ತಿ, ಭಾಗ್ಯ, ಬಾಬು, ವೆಂಕಟರಾಯಪ್ಪ, ಪ್ಯಾರೇಜಾನ್, ಸೋಮಣ್ಣ, ಮಂಜುನಾಥ್ ಹಾಜರಿದ್ದರು.