Home News ಮನಸ್ಸನ್ನು ಪ್ರಶಾಂತಗೊಳಿಸುವ ಸಾಧನ ಯೋಗ

ಮನಸ್ಸನ್ನು ಪ್ರಶಾಂತಗೊಳಿಸುವ ಸಾಧನ ಯೋಗ

0

ದೈಹಿಕ, ಮಾನಸಿಕ ಮತ್ತು ಭಕ್ತಿಯ ಅನುಸಂಧಾನಗೊಂಡ ಒಂದು ಆಚರಣೆಯೇ ಯೋಗ. ಮನಸ್ಸನ್ನು ಪ್ರಶಾಂತಗೊಳಿಸುವ ಕ್ರಮಬದ್ಧವಾದ ಸಾಧನವೆಂದರೆ ಯೋಗ ಎಂದು ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್ ತಿಳಿಸಿದರು.
ನಗರದ ಶ್ರೀಕಾಳಿಕಾಂಬ ಕಮಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯವರು ಸೋಮವಾರ ಸಂಜೆ ಆಯೋಜಿಸಿದ್ದ ೩೯ ನೇ ಉಚಿತ ಯೋಗ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತಂಜಲಿ ಮಹರ್ಷಿಗಳು ೧೯೫ ಸೂತ್ರಗಳ ಮೂಲಕ ಅಷ್ಟಾಂಗ ಯೋಗಸೂತ್ರದ ವಿಧಾನಗಳನ್ನು ತಿಳಿಸಿಕೊಟ್ಟಿದ್ದಾರೆ. ಅಷ್ಟಾಂಗ ಯೋಗವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಅಂಗಗಳನ್ನು ಒಳಗೊಂಡಿದೆ. ಯೋಗವು ಕ್ರಮಬದ್ಧವಾದ ಉಸಿರಾಟ ಮತ್ತು ಏಕಾಗ್ರಚಿತ್ತ ಮನಸ್ಸಿನ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.
ಸದೃಢವಾದ ಶರೀರದಿಂದ ಉತ್ತಮವಾದ ಚಿಂತನೆ ಹೊರಹೊಮ್ಮುತ್ತದೆ. ನಮ್ಮನ್ನು ನಾವು ಶುದ್ಧಿಕರಿಸಿಕೊಳ್ಳುವುದೇ ಯೋಗ. ಒತ್ತಡದ ಬದುಕಿಗೆ ಯೋಗ ಸಹಕಾರಿಯಾಗಿದೆ. ಯಾವುದೇ ಕೆಲಸವನ್ನು ಹೆಚ್ಚು ಕ್ರಿಯಾಶೀಲವಾಗಿ ಮತ್ತು ಸೃಜನಾತ್ಮಕವಾಗಿ ಮಾಡಲು ಮಾನಸಿಕವಾದ ಸಿದ್ದತೆ ಬಹಳ ಮುಖ್ಯವಾದುದು. ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯಲ್ಲಿ ಯೋಗ ಮಹತ್ತರ ಪಾತ್ರ ವಹಿಸುತ್ತದೆ. ಯಾಂತ್ರಿಕ ಬದುಕಿಗೆ ಯೋಗ ಅನಿವಾರ್ಯ ಎಂದರು.
ಯೋಗ ವಿದ್ಯೆಯು ಮನುಷ್ಯನನ್ನು ಮಾನವನನ್ನಾಗಿ ಮಾಡಿಸಿ, ಶಾರೀರಿಕ, ಮಾನಸಿಕ ನೈತಿಕ, ಬೌದ್ದಿಕ ಮತ್ತು ಮಾನವೀಯ ಮೌಲ್ಯಗಳನ್ನು ವಿಕಸನಗೊಳಿಸುತ್ತದೆ. ಯಾವುದೇ ರೋಗಗಳಿಂದ ದೂರವಿರಲು ಪ್ರತಿದಿನ ಯೋಗಾಭ್ಯಾಸವನ್ನು ಮಾಡಬೇಕು ಎಂದರು.
ಕಾಳಿಕಾಂಬ ಕಮಠೇಶ್ವರಸ್ವಾಮಿ ದೇವಾಲಯ ಸಮಿತಿ ಅಧ್ಯಕ್ಷ ಮುನಿರತ್ನಾಚಾರಿ ಮಾತನಾಡಿ, ನಾವು ತಿನ್ನುವ ಆಹಾರದ ವಿಚಾರದಲ್ಲಿ ಹೆಚ್ಚು ಗಮನಹರಿಸಬೇಕು. ಈ ಯೋಗ ಶಿಬಿರದ ಉಪಯೋಗವನ್ನು ಪಡೆದು, ಯೋಗ ಶಿಕ್ಷಣದ ಮಹತ್ವವನ್ನು ಇತರರಿಗೂ ತಿಳಿಸಬೇಕು ಎಂದರು.
ಶಿಕ್ಷಕ ಮಂಜುನಾಥ್, ಯೋಗ ಶಿಕ್ಷಕರಾದ ಪಿ.ಶ್ರೀಕಾಂತ್, ಶುಭ, ಮಂಜುಳ, ಶಿಬಿರಾರ್ಥಿಗಳು ಹಾಜರಿದ್ದರು.