Home News ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ “ಈದ್” ಸಂಭ್ರಮಾಚರಣೆ

ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಿ “ಈದ್” ಸಂಭ್ರಮಾಚರಣೆ

0

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ರಂಜಾನ್ ಎಂದರೆ ಸದಾ ವಿಶೇಷವಾಗಿರುತ್ತದೆ. ಆದರೆ ಈ ಬಾರಿ ಕೊರೊನಾ ವೈರಾಣು ಹಬ್ಬದ ಸಂಭ್ರಮವನ್ನು ಕಿತ್ತುಕೊಂಡಿದೆ. ಉಪವಾಸವಿದ್ದು ಆರೋಗ್ಯವನ್ನು ವೃದ್ಧಿಸಿಕೊಳ್ಳುವುದು ರಂಜಾನ್ ತಿಂಗಳ ಮುಖ್ಯ ಉದ್ದೇಶ. ಹೀಗಾಗಿ ಆರೋಗ್ಯಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟ ತಾಲ್ಲೂಕಿನ ಮಸೀದಿಯ ಮುಖ್ಯಸ್ಥರು ಈ ಬಾರಿ ಸಾಮೂಹಿಕ ಪ್ರಾರ್ಥನೆ ಕೈಬಿಟ್ಟು ಮನೆಯಲ್ಲಿಯೇ ಭಕ್ತಿ ಸಮರ್ಪಿಸಲು ನಿರ್ಧರಿಸಿದ್ದಾರೆ.
ಪ್ರತೀ ವರ್ಷ ಈದ್ ಉಲ್ ಫಿತ್ರ್ ಗೆ ಭರ್ಜರಿ ತಯಾರಿ ನಡೆಸಲಾಗುತ್ತಿತ್ತು. ಎಲ್ಲಾ ಮಸೀದಿ, ದರ್ಗಾಗಳು ಸಂಭ್ರಮಕ್ಕೆ ಸಾಕ್ಷಿಯಾಗಿ ನಿಲ್ಲುತ್ತಿದ್ದವು. ಬಟ್ಟೆ, ಹಣ್ಣು, ಖರ್ಜೂರಗಳ ಅಂಗಡಿಗಳು ಮಸೀದಿಗಳ ಮುಂದೆ ಎದ್ದು ನಿಲ್ಲುತ್ತಿದ್ದವು. ಖರೀದಿಯ ಭರಾಟೆಯಂತೂ ಹಬ್ಬದ ಹಿಂದಿನ ದಿನ ಮಧ್ಯರಾತ್ರಿಯವರೆಗೂ ಸಾಗಿರುತ್ತಿತ್ತು.
ಈ ಬಾರಿ ಲಾಕ್ ಡೌನ್ ಹಾಗೂ ನಿಷೇಧಾಜ್ಞೆಯ ಕಾರಣದಿಂದ ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ. “ಬಟ್ಟೆ ಖರೀದಿ ಹಾಗೂ ಇಫ್ತಾರ್ ಗೆ ಖರ್ಚು ಮಾಡುತ್ತಿದ್ದ ಹಣವನ್ನು ಬಡವರಿಗೆ ನೆರವಾಗಲು ಮತ್ತು ಕೊರೊನಾ ಪರಿಹಾರ ನಿಧಿಗೆ ನೀಡಲು ಬಹುಪಾಲು ಮಸೀದಿ ಮುಖಂಡರು ನಿರ್ಧರಿಸಿದ್ದಾರೆ. ಅಖಿಲ ಭಾರತ ಉಲ್ಮಾಗಳ ಒಕ್ಕೂಟ ಹಾಗೂ ಜಮಾಯಿತಿಗಳಿಂದ ಎಲ್ಲ ಮುಸ್ಲಿಮರಿಗೂ ಸಂದೇಶ ಬಂದಿದ್ದು, ವಿಜೃಂಭಣೆ ಆಚರಣೆ ಬೇಡ, ಜಕಾತ್ ದಾನಕ್ಕೆ ಆದ್ಯತೆ ನೀಡಿ, ಸಾಧ್ಯವಾದರೆ ಬಡವರಿಗೆ ಹೆಚ್ಚು ದಾನ ಮಾಡುವಂತೆ ಸೂಚಿಸಿದ್ದಾರೆ” ಎನ್ನುತ್ತಾರೆ ಧಾರ್ಮಿಕ ಮುಖಂಡರು. ಹಾಗಾಗಿ ಬಹುತೇಕರು ಹೊಸಬಟ್ಟೆ ಖರೀದಿಸದೆಯೇ ಮನೆಯಲ್ಲಿ ಈದ್ ಆಚರಣೆ ಮಾಡಿದ್ದಾರೆ.

error: Content is protected !!