Home News ಮನೆಯೇ ಮೊದಲ ಪಾಠಶಾಲೆ

ಮನೆಯೇ ಮೊದಲ ಪಾಠಶಾಲೆ

0

ಮನೆಯೇ ಮೊದಲ ಪಾಠಶಾಲೆ ಎಂಬ ಹಿರಿಯರ ಮಾತಿನಂತೆ ಮಗುವಿನ ಶಿಕ್ಷಣ ಮನೆಯಿಂದಲೇ ಆರಂಭವಾಗುತ್ತದೆ. ಮಕ್ಕಳಿಗೆ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಮಾಡಿಕೊಡುವಲ್ಲಿ ಪೋಷಕರು ಹೆಚ್ಚಿನ ಗಮನಹರಿಸಬೇಕು ಎಂದು ಚಿಕ್ಕಬಳ್ಳಾಪುರ ಶಾಖಾಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಹನುಮಂತಪುರ ಗೇಟ್ನಲ್ಲಿರುವ ಬಿಜಿಎಸ್ ಶಾಲೆಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಮಾತೃಭೋಜನ ಹಾಗು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
ಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದ ವಾತಾವರಣ ಕಲ್ಪಿಸಿದಿದ್ದಲ್ಲಿ ಮಕ್ಕಳು ಪರಿಪಕ್ವವಾಗಿ ಬೆಳೆಯಲು ಸಾಧ್ಯವಿಲ್ಲ. ಮಕ್ಕಳಿಗೆ ಆದರ್ಶಮಯವಾದ ಶಿಕ್ಷಣದ ಜೊತೆ ಜೊತೆಗೆ ಉತ್ತಮ ಸಂಸ್ಕಾರವನ್ನು ಬೆಳೆಸುವ ಜವಾಬ್ದಾರಿ ತಾಯಿಯ ಮೇಲಿರುತ್ತದೆ. ಪ್ರತಿಯೊಬ್ಬ ಮಗುವೂ ದೇವರ ಪ್ರತಿರೂಪವಾದ ತಾಯಿಯನ್ನು ಗೌರವಿಸುವುದನ್ನು ರೂಡಿಸಿಕೊಳ್ಳಬೇಕು ಎಂದರು.
ಬಿಜಿಎಸ್ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎನ್.ಶಿವರಾಮರೆಡ್ಡಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಹಾಗು ಪೋಷಕರ ಪಾತ್ರ ಬಹಳಷ್ಟು ಮಹತ್ತರವಾದದ್ದು ಹಾಗಾಗಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿರುವ ಸಹಕಾರವನ್ನು ಪೋಷಕರು ಶಿಕ್ಷಕರಿಗೆ ನೀಡಬೇಕು ಎಂದರು.
ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡುವಂತಹ ಗುರಿಯನ್ನು ಬಿಜಿಎಸ್ ಶಿಕ್ಷಣ ಸಂಸ್ಥೆ ಹೊಂದಿದ್ದು ಇದಕ್ಕೆ ಪೂರಕವಾಗಿ ಪೋಷಕರು ಶಿಕ್ಷಕರಿಗೆ ಸಹಕಾರ ನೀಡಬೇಕು. ಮಕ್ಕಳಲ್ಲಿರುವ ಅಪಾರವಾದ ಶಕ್ತಿಯನ್ನು ಹೊರತರುವಂತಹ ಪ್ರಾಮಾಣಿಕ ಪ್ರಯತ್ನವನ್ನು ನಡೆಸಿ ದೇಶದ ಯಾವುದೇ ಮೂಲೆಯಲ್ಲಿಯಾದರೂ ಮಕ್ಕಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವಂತಹ ಸಾಮರ್ಥ್ಯವುಳ್ಳವರನ್ನಾಗಿ ಮಾಡುವ ಧ್ಯೇಯವನ್ನು ಸಂಸ್ಥೆ ಹೊಂದಿದೆ ಎಂದರು.
ಕಾರ್ಯಕ್ರಮದಲ್ಲಿ ಪೋಷಕರು ಮಾತೃಭೋಜನ ಸಮಾರಂಭಕ್ಕಾಗಿ ತಯಾರಿಸಿ ತಂದಿದ್ದ ವಿವಿಧ ರೀತಿಯ ತಿಂಡಿಗಳನ್ನು ಮಕ್ಕಳು ಹಾಗು ಪೋಷಕರು ಸವಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಬಿಜಿಎಸ್ ಶಾಲೆಯ ಪ್ರಾಂಶುಪಾಲ ಆರ್.ಮಹದೇವ್ ಮುಖಂಡರಾದ ಮಳ್ಳೂರು ಶಿವಣ್ಣ, ಕೆಂಪರೆಡ್ಡಿ, ಮುರಳಿ, ದೇವರಾಜ್, ಜೆ.ಎಸ್.ವೆಂಕಟಸ್ವಾಮಿ, ಪುರುಷೋತ್ತಮ್, ಪ್ರತಾಪ್, ಶ್ರೀನಿವಾಸ್ ಹಾಗು ಸಿಬ್ಬಂದಿ ವರ್ಗ ಹಾಜರಿದ್ದರು.