Home News ಮನೆ ಮನೆಗೆ ರವಿಯಣ್ಣ ಕಾರ್ಯಕ್ರಮಕ್ಕೆ ಚಾಲನೆ

ಮನೆ ಮನೆಗೆ ರವಿಯಣ್ಣ ಕಾರ್ಯಕ್ರಮಕ್ಕೆ ಚಾಲನೆ

0

ಕಳೆದ ಕೆಲವು ದಶಕಗಳಿಂದ ಕ್ಷೇತ್ರದಿಂದ ಆಯ್ಕೆಯಾಗಿ ಕ್ಷೇತ್ರದ ಅಭಿವೃದ್ಧಿ ಮರೆತು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಗಳಿಸಿರುವ ಸಂಪತ್ತನ್ನು ರಕ್ಷಿಸಿಕೊಳ್ಳಲು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ನಡೆಸುತ್ತಿರುವ ಮಾಜಿ ಶಾಸಕರನ್ನು ಕ್ಷೇತ್ರದ ಜನರು ಈ ಭಾರಿಯ ಚುನಾವಣೆಯಲ್ಲಿ ಸೋಲಿಸುವ ಮೂಲಕ ಉತ್ತಮರನ್ನು ಆಯ್ಕೆ ಮಾಡಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು ತಿಳಿಸಿದರು.
ತಾಲ್ಲೂಕಿನ ಗೊರಮಡುಗು ಗ್ರಾಮದಲ್ಲಿ ಶುಕ್ರವಾರ ಮನೆ ಮನೆಗೆ ರವಿಯಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜೆಡಿಎಸ್ ಬಂಡಾಯ ಅಭ್ಯರ್ಥಿ ಬಿ.ಎನ್.ರವಿಕುಮಾರ್ ಪರ ಅವರು ಮತ ಯಾಚಿಸಿದರು.
ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವಲ್ಲಿ ಶ್ರಮಿಸಿದ ಪಕ್ಷದ ಹಿರಿಯ ಮುಖಂಡರೂ ಹಾಗೂ ಕಾರ್ಯಕರ್ತರನ್ನು ಹಾಲಿ ಶಾಸಕ ಎಂ.ರಾಜಣ್ಣ ಕಡೆಗಣಿಸಿದ್ದಾರೆ. ಈ ಕಾರಣದಿಂದ ಬೇಸತ್ತಿರುವ ಪಕ್ಷದ ಬಹುತೇಕ ಮುಖಂಡರೂ ಮತ್ತು ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಈ ಭಾರಿಯ ಚುನಾವಣೆಯಲ್ಲಿ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಬಿ.ಎನ್.ರವಿಕುಮಾರ್‌ರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವೊಲಿಸಿದ್ದು, ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಜನರ ಆಸೆಯಂತೆ ಬಿ.ಎನ್.ರವಿಕುಮಾರ್ ಜಯಗಳಿಸುವರು. ಹಾಲಿ ಹಾಗೂ ಮಾಜಿ ಶಾಸಕರಿಬ್ಬರೂ ಸೋತು ಮನೆ ಸೇರಲಿದ್ದಾರೆ ಎಂದರು.
ಕಳೆದ ೧೨ ವರ್ಷಗಳಿಂದ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಸಂಘಟನೆ ಹಾಗು ಜನರ ಅಭಿವೃದ್ಧಿಗಾಗಿ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಬಿ.ಎನ್.ರವಿಕುಮಾರ್ ಅವರನ್ನು ಈ ಭಾರಿಯ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಕ್ಷೇತ್ರದ ಅಮಗ್ರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯೆ ನೇತ್ರಾಲಕ್ಷ್ಮೀಪತಿ, ಮುಖಂಡರಾದ ಗೊರಮಡುಗು ರಾಮಾಂಜಿನಪ್ಪ, ತಾದೂರು ರಘು, ಕೊತ್ತನೂರು ಲಕ್ಷ್ಮೀಪತಿ, ರಾಮರಾಜು, ಕನ್ನಮಂಗಲ ಅಶ್ವತ್ಥ್ ಹಾಜರಿದ್ದರು.