ಫೆಬ್ರುವರಿ ೦೩ ರಂದು ಜೆಡಿಎಸ್ ಪ್ರಚಾರ ‘ಮನೆ ಮನೆ ಕುಮಾರಣ್ಣ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಎಚ್.ಡಿ.ದೇವೇಗೌಡ ಹಾಗೂ ಜಯಪ್ರಕಾಶ್ ನಾರಾಯಣ್ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಬಿ.ಎನ್.ರವಿಕುಮಾರ್ ಮನವಿ ಮಾಡಿದರು.
ತಾಲ್ಲೂಕಿನ ಚಿಕ್ಕದಾಸರಹಳ್ಳಿಯ ಶ್ರೀ ಬ್ಯಾಟರಾಯಸ್ವಾಮಿ ಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಜೆಡಿಎಸ್‌ನ ಹಿರಿಯ ಮುಖಂಡರು ಹಾಗೂ ಜಿಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರತಿಯೊಬ್ಬ ಕಾರ್ಯಕರ್ತರೂ ಹಗಲಿರುಳು ದುಡಿದು ಶಾಸಕರಾಗಿ ಆಯ್ಕೆ ಮಾಡಿದ ವ್ಯಕ್ತಿ ನಂತರ ಪ್ರಾಮಾಣಿಕ ಕಾರ್ಯಕರ್ತರು ಮತ್ತು ಪಕ್ಷದ ಆಧಾರ ಸ್ಥಂಬಗಳ ಹಾಗೆ ಇದ್ದ ಹಿರಿಯ ಮುಖಂಡರನ್ನು ಬದಿಗಿಟ್ಟು ರಾಜಕಾರಣ ಮಾಡಿದ್ದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನೋವಾಯಿತು. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕಾರ್ಯಕರ್ತರ ಒತ್ತಾಯದಂತೆ ಒಪ್ಪಿಕೊಂಡಿದ್ದೇನೆ ಎಂದರು.
ಮುಖಂಡರನ್ನೆಲ್ಲಾ ಒಗ್ಗೂಡಿಸಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಟ್ರಸ್ಟ್ ರಚಿಸಿ ಟ್ರಸ್ಟ್ ಮೂಲಕ ಕ್ಷೇತ್ರದ ಜನರಿಗೆ ನಮ್ಮ ಕೈಲಾದ ಸಹಾಯ ಮಾಡುತ್ತಾ ಬಂದಿದ್ದೇವೆ. ಈಗಲೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲ ಪಡಿಸಲು ಪ್ರಾಮಾಣಿಕವಾಗಿ ದುಡಿಯುತ್ತೇನೆ. ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವುದು ಬಿಡುವುದು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು ಹಾಗೂ ಪಕ್ಷದ ವರಿಷ್ಠರಿಗೆ ಬಿಡಲಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ ಕಳೆದ ಚುನಾವಣೆಯ ವೇಳೆ ಕೃಷ್ಣಾರ್ಜುನರಂತಿದ್ದ ಬಿ.ಎನ್.ರವಿಕುಮಾರ್ ಹಾಗು ಶಾಸಕ ಎಂ.ರಾಜಣ್ಣ ಇದೀಗ ಬದ್ದ ಶತ್ರುಗಳಂತೆ ವರ್ತಿಸುವ ಮೂಲಕ ಕ್ಷೇತ್ರದಲ್ಲಿ ಜೆಡಿಎಸ್ ನಲ್ಲಿ ಎರಡು ಬಣಗಳಾಗಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. ಇವರಿಬ್ಬರನ್ನೂ ಒಂದು ಮಾಡಬೇಕು ಎಂಬ ಕಾರಣದಿಂದ ಹಲವಾರು ಭಾರಿ ಕುಳಿತು ಚರ್ಚಿಸಿ ಭಿನ್ನಾಬಿಪ್ರಾಯ ಶಮನಮಾಡಲು ಪ್ರಯತ್ನಿಸುತ್ತಿದ್ದೇವೆ. ತಮಗಾಗಿ ನಿಷ್ಠೆಯಿಂದ ದುಡಿದು ತಮ್ಮನ್ನು ಶಾಸಕರನ್ನಾಗಿ ಮಾಡುವವರೆಗೂ ಪ್ರಾಮಾಣಿಕವಾಗಿ ದುಡಿದ ಬಿ.ಎನ್.ರವಿಕುಮಾರ್ ಅವರನ್ನು ಕಡೆಗಣಿಸಿ ರಾಜಕೀಯ ಮಾಡುವುದು ಶೋಭೆ ತರುವುದಿಲ್ಲ ಎಂದರು.
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯ ಆಯ್ಕೆಯ ಬಗ್ಗೆ ಪಕ್ಷದ ಮುಖಂಡರ ಹಾಗು ಕಾರ್ಯಕರ್ತರ ಅಭಿಪ್ರಾಯ ಪಡೆದು ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳದೇ ಕ್ಷೇತ್ರದಲ್ಲಿ ಈ ಹಿಂದಿನಂತೆ ಜೆಡಿಎಸ್ ಪಕ್ಷದ ಅಭಿವೃದ್ದಿಯ ಬಗ್ಗೆ ಪ್ರತಿಯೊಬ್ಬರೂ ಯೋಚಿಸಿ ಕಾರ್ಯ ಪ್ರವೃತ್ತರಾಗಬೇಕು ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ತನುಜಾರಘು, ನಗರಸಭೆ ಪ್ರಭಾರ ಅಧ್ಯಕ್ಷೆ ಪ್ರಭಾವತಿಸುರೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಪಿ.ವಿ.ನಾಗರಾಜ್, ಪಿ.ಶಿವಾರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಲಕ್ಷ್ಮಿನಾರಾಯಣ, ಉಪಾಧ್ಯಕ್ಷ ಎಚ್.ನರಸಿಂಹಯ್ಯ, ಸದಸ್ಯ ರಾಜಶೇಖರ್, ನಗರಸಭೆ ಸದಸ್ಯ ಪಿ.ಕೆ.ಕಿಷನ್, ಜಭೀ, ಲಕ್ಷ್ಮಯ್ಯ, ಕದಿರಿಯೂಸುಫ್, ಆದಿಲ್‌ಪಾಷ, ಸಮೀವುಲ್ಲಾ, ಸೈಯ್ಯದ್, ಚೀಮಂಗಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಸಾದಲಿ ತ್ಯಾಗರಾಜ್, ಎಸ್.ದೇವಗಾನಹಳ್ಳಿಯ ವೇಣು, ಮಂಜುನಾಥ್, ದಿಬ್ಬೂರಹಳ್ಳಿಯ ಗೋಪಿ, ಲಕ್ಕಹಳ್ಳಿಯ ಆಂಜನೇಯಲು, ಜೆ.ಎಂ.ವೆಂಕಟೇಶ್, ಮುಗಿಲಡಿಪಿ ನಂಜಪ್ಪ, ನಾಗಮಂಗಲ ಶ್ರೀನಿವಾಸಗೌಡ ಹಾಜರಿದ್ದರು.