Home News ಮಲಗಿದ ರಾಗಿ ತೆನೆ, ರೈತರಿಗೆ ಅಪಾರ ನಷ್ಟ ತಂದ ಜಡಿಮಳೆ

ಮಲಗಿದ ರಾಗಿ ತೆನೆ, ರೈತರಿಗೆ ಅಪಾರ ನಷ್ಟ ತಂದ ಜಡಿಮಳೆ

0

ನಗರ ಮತ್ತು ತಾಲ್ಲೂಕಿನಾದ್ಯಂತ ‘ಒಕಿ’ ಚಂಡಮಾರುತ ಆರಂಭವಾದ ಜಡಿ ಮಳೆ ಇನ್ನೂ ಮುಂದುವರಿದಿದ್ದರಿಂದ ಲಕ್ಷಾಂತರ ರೂಪಾಯಿ ಬೆಳೆ ಹಾಳಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ.
ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಸಂತಸದಿಂದಿದ್ದರು. ತಾಲ್ಲೂಕಿನಲ್ಲಿ ರಾಗಿ ಹೊಲ ನಳನಳಿಸುತ್ತಿದ್ದವು. ಈ ವರ್ಷ ಉತ್ತಮ ಮೇವು ಹಾಗೂ ಫಸಲು ಕೈಸೇರುತ್ತದೆ ಎಂದು ರೈತರು ನಿರೀಕ್ಷೆಯಲ್ಲಿದ್ದರು.

ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸುತ್ತಮುತ್ತ ಜಡಿಮಳೆಗೆ ಕುಸಿದ ರಾಗಿ ತೆನೆಗಳು

ಈಗ ಮೊದಲ ಹಂತದ ರಾಗಿ ಬೆಳೆ ಕೊಯ್ಲಿಗೆ ಹಾಗೂ ಎರಡನೇ ಹಂತದ ಬೆಳೆ ತೆನೆ ಬಂದಿದ್ದು ಕಾಳು ಕಟ್ಟುತ್ತಿತ್ತು. ಜಡಿ ಮಳೆಯಿಂದ ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ರೈತರ ನಿರೀಕ್ಷೆ ಹುಸಿಯಾಗಿಸಿದೆ. ನಿತ್ಯ ಮಳೆಯಾಗುತ್ತಿದ್ದರಿಂದ ಕೊಯ್ಲು ಮಾಡಲು ಆಗುತ್ತಿಲ್ಲ. ಕೊಯ್ಲು ಮಾಡದಿದ್ದರೆ ರಾಗಿ ನೆಲಕ್ಕೆ ಉದುರಿ ಮೊಳಕೆ ಬರುತ್ತದೆ ಎಂಬ ಆಂತಕ ರೈತರನ್ನು ಕಾಡುತ್ತಿದೆ. ಸದಾ ಮಳೆಗಾಗಿ ಎದುರು ನೋಡುತ್ತಿದ್ದ ರೈತರು ಮಳೆ ಯಾವಾಗ ನಿಲ್ಲುತ್ತದೆ ಎಂದು ಕಾಯುವಂತಾಗಿದೆ.
ಗ್ರಾಮೀಣ ಭಾಗಗಳಲ್ಲಿ ದನಕರುಗಳಿಗೆ ಮೇವು ತರುವುದು, ರೇಷ್ಮೆ ಹುಳಗಳಿಗೆ ಸೊಪ್ಪು ತರುವುದು, ಹಣ್ಣಾಗುವ ಹುಳುಗಳಿರುವ ರೈತರಿಗೆ ತುಂಬಾ ತೊಂದರೆಯಾಗಿದೆ. ಒಂದು ವಾರದಿಂದ ಹಣ್ಣಾದ ರೇಷ್ಮೆ ಹುಳುಗಳ ರೈತರು ಪಾತಾಳಕ್ಕೆ ಇಳಿದಿದ್ದಾರೆ. ರೇಷ್ಮೆ ಬೆಳೆಗೂ ಈ ವಾತಾವರಣದಿಂದ ತೊಂದರೆಯಾಗಿದೆ ಎನ್ನುತ್ತಾರೆ ಅಪ್ಪೇಗೌಡನಹಳ್ಳಿಯ ಮುನಿಯಪ್ಪ.
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿ ಸುತ್ತಮುತ್ತ ಜಡಿಮಳೆಗೆ ಕುಸಿದ ರಾಗಿ ತೆನೆಗಳು

ಕಾರ್ಮಿಕರ ಕೊರತೆಯ ಹಿನ್ನೆಲೆಯಲ್ಲಿ ಕಾರ್ಮಿಕರ ಕೂಲಿಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆದಿರುವ ರಾಗಿಯ ಬೆಳೆಯನ್ನು ಕಟಾವು ಮಾಡಲು ಕಾರ್ಮಿಕರೆಲ್ಲರು ಒಟ್ಟುಗೂಡು ಒಪ್ಪಂದ ಮಾಡಿಕೊಳ್ಳುತ್ತಾರೆ. ಅದಕ್ಕೆ ಸುಮಾರು ₨ 6000 ದವರೆಗೂ ನಿಗದಿ ಪಡಿಸಿದ್ದಾರೆ. ದಿನಗೂಲಿ ಲೆಕ್ಕದಲ್ಲಿ ಕಟಾವು ಮಾಡಿಕೊಡಬೇಕಾದರೆ ಒಬ್ಬ ಕಾರ್ಮಿಕರಿಗೆ ಪುರುಷರಿಗೆ ₨300, ಸ್ತ್ರೀಯರಿಗೆ ₨250 ಗಳನ್ನು ನಿಗದಿ ಪಡಿಸಿಕೊಂಡಿದ್ದಾರೆ. ಕಾರ್ಮಿಕರಿಗೆ ಊಟವನ್ನು ರೈತರೇ ಕೊಡಬೇಕು. ಅವರನ್ನು ಕರೆದುಕೊಂಡು ಬಂದು ಕೆಲಸ ಪೂರ್ಣವಾದ ನಂತರ ಹಳ್ಳಿಗಳಿಗೆ ಬಿಟ್ಟು ಬರಬೇಕು. ಯಂತ್ರಗಳನ್ನು ಬಳಸಿ ಕಟಾವು ಮಾಡುವ ಮೂಲಕ ಹಣ ಉಳಿಸಬಹುದೆಂದುಕೊಂಡಿದ್ದೆವು. ಆದರೆ ಈಗ ಜಡಿಮಳೆಯಿಂದ ನೆಲ ಕಚ್ಚಿರುವ ಬೆಳೆಯನ್ನು ಯಂತ್ರದ ಮೂಲಕ ಕಟಾವು ಮಾಡಲಾಗದು ಎಂದು ತಮ್ಮ ಸಂಕಷ್ಟವನ್ನು ರೈತರಾದ ರಾಮಣ್ಣ, ಗೋಪಾಲಪ್ಪ ಹಾಗೂ ಕೃಷ್ಣಪ್ಪ ವಿವರಿಸಿದರು.
ಮಳೆಗೆ ನೆಲಕಚ್ಚಿರುವ ರಾಗಿಯು ಕೆಂಪು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಅದರ ಬೆಲೆ ಮತ್ತು ಗುಣಮಟ್ಟ ಕುಸಿಯುತ್ತದೆ. ಹಾಗೇ ಬಿಟ್ಟರೆ ಮೊಳಕೆ ಬಂದು ಎಲ್ಲವೂ ಹಾಳಾಗುತ್ತದೆ. ದನಗಳಿಗೆ ಉತ್ತಮ ಮೇವು ಸಿಗುವ ಆಶಾಭಾವನೆಯಿಂದ ಇದ್ದೆವು. ಆದರೆ ನೀರಿನ ಅಂಶದಿಂದ ಹುಲ್ಲು ಕೊಳೆಯುತ್ತದೆ. ದನಗಳು ತಿನ್ನಲ್ಲ. ಬೆಳೆ ಬೆಳೆದರೂ ಬೆತ್ತಲಾದ ಪರಿಸ್ಥಿತಿ ನಮ್ಮದಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆ ಮಾತು ನಮಗೆ ಅನ್ವಯಿಸುತ್ತದೆ ಎಂದು ರೈತರಾದ ಕೆಂಪಣ್ಣ ಮತ್ತು ಮುನಿಯಪ್ಪ ಬೇಸರದಿಂದ ನುಡಿದರು.