Home News ಮಳಮಾಚನಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ

ಮಳಮಾಚನಹಳ್ಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ

0

ಕನ್ನಡದ ಹೆಸರಿನಲ್ಲಿ ಹಲವಾರು ಸಂಘಟನೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಕನ್ನಡಿಗರ ಆಶೋತ್ತರಗಳನ್ನು ಎಷ್ಟು ಸಂಘಟನೆಗಳು ಈಡೇರಿಸಲು ಸಫಲವಾಗಿವೆ ಎಂದು ಆತ್ಮಾವಲೋಕನೆ ಮಾಡಿಕೊಳ್ಳಬೇಕಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ದಾ.ಪಿ.ಆಂಜಿನಪ್ಪ ತಿಳಿಸಿದರು.
ತಾಲ್ಲೂಕಿನ ಮಳಮಾಚನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಾಲ್ಕನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿಗಳು ಬೆಂಗಳೂರು ಮಹಾನಗರವನ್ನು ಮೂರು ಭಾಗಗಳನ್ನಾಗಿ ಮಾಡಲು ಹೊರಟಿದ್ದಾರೆ. ಒಂದು ಭಾಗ ತಮಿಳರಿಗೆ, ಮತ್ತೊಂದು ತೆಲುಗರಿಗೆ ಹಾಗೂ ಉಳಿದೊಂದು ಭಾಗವನ್ನು ಮರಾಠಿಗರಿಗೆ ಕೊಟ್ಟು ಕೊನೆಗೆ ಕನ್ನಡಿಗರನ್ನು ಹೊರಸಾಗಿಸುವ ಪರಿಸ್ಥಿತಿ ತಂದೊಡ್ಡುತ್ತಿದ್ದಾರೆ. ಭಾಷೆ ಅಳಿದರೆ ನಮ್ಮ ಉಸಿರು ನಿಂತಂತೆ. ಸಂಸ್ಕೃತಿ ಅಳಿದಂತೆ. ನಮ್ಮ ಆಲೋಚನಾ ಕ್ರಮವನ್ನು ಬೇರೆ ಭಾಷೆ ನಿಯಂತ್ರಿಸಬಾರದು. ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಉಳಿವಿಗಾಗಿ ಕಂಕಣಬದ್ಧವಾಗಿದೆ. ಸರ್ಕಾರದ ಕನ್ನಡದ ವಿರೋಧಿನೀತಿಯನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಯುವಕರು ಕನ್ನಡಿಗರ ಸಮಸ್ಯೆಗಳನ್ನು ಬಗೆ ಹರಿಸುವ ನಿಟ್ಟಿನಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಕನ್ನಡದಲ್ಲಿ ಹೆಚ್ಚು ಅಂಕಗಳಿಸಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ನಗದು ಬಹುಮಾನ ವಿತರಿಸಿದರು. ರಕ್ತದಾನ ಶಿಬಿರವನ್ನು ನಡೆಸಲಾಯಿತು. ರಸಸಂಜೆಯನ್ನು ರಾತ್ರಿ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಆರ್.ಶ್ರೀನಿವಾಸ್, ಕ.ರ.ವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಮಳಮಾಚನಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಬಿ.ಬೈರೇಗೌಡ, ಡಿ.ಲಕ್ಷ್ಮಯ್ಯ, ಬಿ.ಎನ್.ಕೃಷ್ಣಯ್ಯ, ಎಂ.ಸಿ.ಜಗದೀಶ್, ಮೇಲೂರು ಉಮೇಶ್, ಎಂ.ಕೆ.ರಾಜಶೇಖರ್, ಎಂ.ಎಲ್.ಮುನೇಗೌಡ, ಎಂ.ದೇವರಾಜು, ಮಳಮಾಚನಹಳ್ಳಿಯ ಕ.ರ.ವೇ ಗೌರವಾಧ್ಯಕ್ಷ ಎಂ.ಜೆ.ಪ್ರವೀಣ್ ಕುಮಾರ್, ಅಧ್ಯಕ್ಷ ಎಂ.ಗಯನ್ಗೌಡ, ಮುನಿರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.