ಇಪ್ಪತ್ತೈದು ವರ್ಷಗಳು ಎಂಬುದು ಯಾರದೇ ಬದುಕಿನಲ್ಲಿ ಒಂದು ಮೈಲಿಗಲ್ಲು. ‘ಬೆಳ್ಳಿ ವರ್ಷ‘ ಪೂರೈಸಿದ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಪುನಃ ಶಾಲೆಗೆ ಬಂದು ಗುರುಗಳನ್ನು ಸಿಬ್ಬಂದಿಯನ್ನು ಗೌರವಿಸುವ ಮೂಲಕ ಪಾಠ ಹೇಳಿಕೊಟ್ಟ ನಮಗೆ ಮರೆಯಲಾಗದ ಉಡುಗೊರೆ ನೀಡಿದ್ದಾರೆ ಎಂದು ನಿವೃತ್ತ ಮುಖ್ಯ ಶಿಕ್ಷಕ ಎಂ.ಎ.ಆನಂದ್ ಭಾವುಕವಾಗಿ ನುಡಿದರು.
ತಾಲ್ಲೂಕಿನ ಮಳ್ಳೂರಿನ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯಲ್ಲಿ ಭಾನುವಾರ 1992 – 93ನೇ ಸಾಲಿನ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಹಾಗೂ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜೀವನ ಎಂಬುದು ಒಂದು ಬೃಹತ್ ಮರದಂತೆ. ಮರದ ಮುಖ್ಯ ಕಾಂಡವು ಎಸ್‌ಎಸ್‌ಎಲ್‌ಸಿ ಎಂಬ ಘಟ್ಟದ ನಂತರ ಟಿಸಿಲೊಡೆದು, ಕವಲು ಕವಲಾಗಿ ಬೆಳೆಯುತ್ತಾ ಹೋಗುತ್ತದೆ. ತಮ್ಮ ಬದುಕಿನಲ್ಲಿ ಗಟ್ಟಿತನಕ್ಕೆ ಕಾರಣರಾದವರನ್ನು ಸ್ಮರಿಸಲು ಯಾರಿಗೂ ವ್ಯವಧಾನ ಇರುವುದಿಲ್ಲ. ಅಷ್ಟೊಂದು ವೇಗವಾಗಿದೆ ಮತ್ತು ಜಟಿಲಗೊಂಡಿದೆ ಬದುಕು. ಎಸ್‌ಎಸ್‌ಎಲ್‌ಸಿ ಓದಿ ಮುಗಿಸಿದ 25 ವರ್ಷಗಳ ನಂತರ ಶಾಲೆಯಲ್ಲಿ ಒಂದುಗೂಡಿರುವ ಶಿಷ್ಯರನ್ನು ಕಂಡು ಸಾರ್ಥಕತೆಯ ಭಾವ ಮೂಡಿದೆ. ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಒಂದಲ್ಲಾ ಒಂದು ರೀತಿಯ ಸಾಧನೆ ಮಾಡಿದ್ದಾರೆ. ಗುರುವಾದ ನಮಗೆ ಇದಕ್ಕಿಂತ ಮಿಗಿಲಾದ ಗೌರವ, ಸಮಾಧಾನ, ಹೆಮ್ಮೆ, ಪ್ರಶಸ್ತಿ ಯಾವುದೂ ಇಲ್ಲ ಎಂದು ಅಭಿಮಾನದಿಂದ ಹೇಳಿದರು.
ಈ ಸಂದರ್ಭದಲ್ಲಿ 1992 – 93ನೇ ಸಾಲಿನ 65 ಮಂದಿ ವಿದ್ಯಾರ್ಥಿಗಳು, ಶಿಕ್ಷಕರಾದ ಎಂ.ಎನ್.ನರಸಿಂಹಮೂರ್ತಿ, ಎಂ.ವೀರಭದ್ರಪ್ಪ, ಬೈರಾರೆಡ್ಡಿ, ಎನ್.ನಾರಾಯಣಸ್ವಾಮಿ, ರೆಡ್ಡಪ್ಪರೆಡ್ಡಿ, ಯು.ಪಿ.ನರಸಿಂಹಮೂರ್ತಿರಾವ್ ಹಾಗೂ ಸಿಬ್ಬಂದಿಯನ್ನು ಗೌರವಿಸಲಾಯಿತು.