Home News ಮಳ್ಳೂರು ಗ್ರಾಮ ಪಂಚಾಯಿತಿ ಮುಂದೆ ಅಂಕತಟ್ಟಿ ಗ್ರಾಮಸ್ಥರ ಪ್ರತಿಭಟನೆ

ಮಳ್ಳೂರು ಗ್ರಾಮ ಪಂಚಾಯಿತಿ ಮುಂದೆ ಅಂಕತಟ್ಟಿ ಗ್ರಾಮಸ್ಥರ ಪ್ರತಿಭಟನೆ

0

ಸರ್ಕಾರಿ ಗ್ರಾಮ ಠಾಣಾ ಜಾಗವನ್ನು ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಸಹಕಾರದಿಂದ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಪ್ರಭಾವಿಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟು, ಇ ಖಾತೆಯನ್ನೂ ಮಾಡಿಕೊಡುವ ಮೂಲಕ ಇಲಾಖೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಬಡವರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿ ಅಂಕತಟ್ಟಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಮಳ್ಳೂರು ಗ್ರಾಮ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪುಟ್ಟಣ್ಣಯ್ಯ ಬಣ) ಸದಸ್ಯರು ಅಧಿಕಾರಿಗಳ ವಿರುದ್ಧ ಘೋಷಣೆಗಳು ಕೂಗಿ, ಅಕ್ರಮ ಖಾತೆಗಳು ಮಾಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಪಡಿಸಬೇಕು ಎಂದು ಒತ್ತಾಯಿಸಿದರು.
ಅಂಕತಟ್ಟಿ ಗ್ರಾಮದ ಮುಖಂಡ ಎಸ್.ವೆಂಕಟರೆಡ್ಡಿ ಮಾತನಾಡಿ, ಅಂಕತಟ್ಟಿ ಗ್ರಾಮದ ಸರ್ವೆ ನಂಬರ್ ೭/೨ ರಲ್ಲಿ ೪.೮೬ ಹೆಕ್ಟೇರ್ ೧೨. ಎಕರೆ ೩೦ ಭೂಮಿ ಇದೆ. ಈ ಭೂಮಿಯನ್ನು ಇದುವರೆಗೂ ಹೌಸ್‌ಲಿಸ್ಟ್ ಮಾಡಿಲ್ಲ. ೪ ಎಕರೆ ಸರ್ಕಾರಿ ಗ್ರಾಮಠಾಣೆ ಜಾಗಕ್ಕೆ ದಾಖಲೆಗಳೇ ಇಲ್ಲ. ಈ ಜಾಗವನ್ನು ಗ್ರಾಮದ ಪ್ರಭಾವಿಗಳು ೨೦೧೭ ರಲ್ಲಿ ಒತ್ತುವರಿ ಮಾಡಲು ಪ್ರಯತ್ನ ಮಾಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಗ್ರಾಮಸ್ಥರು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿ, ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಎಲ್ಲರಿಗೂ ದೂರುಗಳು ಕೊಟ್ಟಿದ್ದೆವು. ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಇಲಾಖೆಯ ಮೇಲಾಧಿಕಾರಿಗಳು ಆದೇಶ ನೀಡಿದ್ದರು.
ಮೇಲಾಧಿಕಾರಿಗಳ ಆದೇಶದಂತೆ ಅಂತಕಟ್ಟಿ ಗ್ರಾಮಕ್ಕೆ ಬಂದಿದ್ದ ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸದರಿ ಭೂಮಿಯನ್ನು ಸರ್ವೆ ಮಾಡಿ ಗಡಿ ಗುರ್ತಿಸಿದ್ದರು. ಸರ್ಕಾರಿ ಗ್ರಾಮಠಾಣಾ ಜಾಗವನ್ನು ಪಂಚಾಯಿತಿ ವಶಕ್ಕೆ ತೆಗೆದುಕೊಳ್ಳುವಂತೆ, ಅಕ್ರಮವಾಗಿ ಅನುಭವದಲ್ಲಿರುವವರಿಗೆ ನೋಟಿಸ್ ಜಾರಿ ಮಾಡುವಂತೆ ಆದೇಶ ಮಾಡಿದ್ದರೂ, ಇದುವರೆಗೂ ಸದರಿ ಭೂಮಿಯನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿಲ್ಲ. ಅಧಿಕಾರಿಗಳು ಶಾಮೀಲಾಗಿ ಸದರಿ ಭೂಮಿಯನ್ನು ನಿಯಮಬಾಹಿರವಾಗಿ ದಾಖಲೆಗಳನ್ನು ಸೃಷ್ಠಿಮಾಡಿ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ ಮಾತನಾಡಿ, ಸರ್ಕಾರಿ ಭೂಮಿಯನ್ನು ಉಳಿಸಿ, ಬಡವರಿಗೆ ನಿವೇಶಗಳನ್ನು ಹಂಚಿಕೆ ಮಾಡಬೇಕು ಎಂದು ಹೋರಾಟ ಮಾಡುತ್ತಿರುವವರ ವಿರುದ್ಧವಾಗಿ ಪೊಲೀಸರಿಗೆ ದೂರು ನೀಡಿ, ವಿನಾಕಾರಣ ಮಾನಸಿಕವಾಗಿ ಹಿಂಸೆ ಮಾಡಲಾಗಿದೆ. ನಿಯಮಬಾಹಿರವಾಗಿ ಅಕ್ರಮವಾಗಿ ಮಾಡಿಕೊಟ್ಟಿರುವ ಖಾತೆಗಳನ್ನು ವಜಾಗೊಳಿಸಬೇಕು, ಅಕ್ರಮ ಖಾತೆಗಳನ್ನು ಮಾಡಲಿಕ್ಕೆ ಸಹಕಾರ ನೀಡಿರುವ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಪಡಿಸಬೇಕು, ಸದರಿ ಭೂಮಿಯನ್ನು ಪಂಚಾಯಿತಿ ವಶಕ್ಕೆ ಪಡೆದುಕೊಂಡು ಬಡವರಿಗೆ ನಿವೇಶಗಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್ ಸ್ಥಳಕ್ಕೆ ಬೇಟಿ ನೀಡಿ, ಖಾತೆಗಳು ಮಾಡಿರುವ ಕುರಿತು ನೇರವಾಗಿ ಕ್ರಮ ಕೈಗೊಳ್ಳಲಿಕ್ಕೆ ನಮಗೆ ಅಧಿಕಾರವಿಲ್ಲ. ಪಂಚಾಯಿತಿಯಿಂದ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ಮಾಡಲಿಕ್ಕೆ ಸಮಯಾವಕಾಶ ಬೇಕಾಗಿದೆ ಎಂದು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಪ್ರತಿಭಟನಾಕಾರರು ಸಮಸ್ಯೆ ಇತ್ಯರ್ಥವಾಗುವ ತನಕ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದರಿಂದ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ವರದಿ ಸಲ್ಲಿಸುವುದಾಗಿ ಹೇಳಿದರು.
ಗ್ರಾಮ ಪಂಚಾಯಿತಿ ಆವರಣದಲ್ಲಿ ಬಿಗಿಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿತ್ತು.
ರೈತ ಸಂಘದ ಮುಖಂಡ ಮಳ್ಳೂರು ಶಿವಣ್ಣ, ಮುಖಂಡರಾದ ಜಗನ್ನಾಥ್, ಬಾಬು, ನಾರಾಯಣಸ್ವಾಮಿ, ಎಸ್.ದೇವರಾಜು, ಕೆ.ದೇವರಾಜು, ಅನಿತಮ್ಮ, ಅಮೃತ, ರತ್ನಮ್ಮ, ಗೌರಮ್ಮ, ನಾರಾಯಣಮ್ಮ, ರಾಧಮ್ಮ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಶ್ರೀನಿವಾಸ್, ಅರುಣ್‌ಕುಮಾರ್, ಚನ್ನೇಗೌಡ, ನಾಗರಾಜ್, ಶಂಕರನಾರಾಯಣ, ಶ್ರೀನಿವಾಸ್, ಶ್ರೀಧರ್, ಚಿಕ್ಕವೆಂಕಟರಾಯಪ್ಪ ಹಾಜರಿದ್ದರು

error: Content is protected !!