Home News ಮಳ್ಳೂರು ವಿದ್ಯಾರ್ಥಿಗಳಿಗೆ ಅಮೇರಿಕೆಯ ಆತ್ಮ ರಕ್ಷಣಾ ಪಾಠ

ಮಳ್ಳೂರು ವಿದ್ಯಾರ್ಥಿಗಳಿಗೆ ಅಮೇರಿಕೆಯ ಆತ್ಮ ರಕ್ಷಣಾ ಪಾಠ

0

ತಾಲ್ಲೂಕಿನ ಮಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಟೇಕ್ವಾಂಡೋ ಆತ್ಮ ರಕ್ಷಣಾ ಕಲೆಯನ್ನು ಕಲಿಯುತ್ತಿದ್ದಾರೆ.
ಭಾರತೀಯ ಮೂಲದ ರೋಹಿತ್ ಕೃಷ್ಣಮೂರ್ತಿ ಮತ್ತು ಸಂಜಿತ್ ಕೃಷ್ಣಮೂರ್ತಿ ತಮ್ಮ ತಾಯಿ ಜಯಭಾರತಿ ಅವರೊಂದಿಗೆ ಅಮೆರಿಕೆಯಿಂದ ಒಂದು ತಿಂಗಳ ಕಾಲಾವಧಿಗೆ ಭಾರತಕ್ಕೆ ಬಂದಿದ್ದು, ಮಳ್ಳೂರು ಮತ್ತು ಮುತ್ತೂರಿನ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಆತ್ಮರಕ್ಷಣಾ ಕಲೆಯನ್ನು ಕಲಿಸುತ್ತಿದ್ದಾರೆ.
ಅಮೆರಿಕೆಯಲ್ಲಿ ಹನ್ನೆರಡನೇ ತರಗತಿ ಮತ್ತು ಮೂರನೇ ತರಗತಿಯಲ್ಲಿ ಓದುತ್ತಿರುವ ಈ ಸಹೋದರರು ಟೇಕ್ವಾಂಡೋ ಕಲೆಯಲ್ಲಿ ಮೂರು ಡಿಗ್ರಿ ಪೂರೈಸಿದ್ದಾರೆ. ಇದರಿಂದಾಗಿ ಇತರರಿಗೆ ತರಬೇತಿಯನ್ನು ನೀಡುವ ಅರ್ಹತೆಯನ್ನು ಪಡೆದಿದ್ದು. ಭಾರತದಲ್ಲಿನ ಗ್ರಾಮೀಣ ಮಕ್ಕಳಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಕಲಿಸುವ ಉದ್ದೇಶದಿಂದ ಮಳ್ಳೂರಿಗೆ ಬಂದಿದ್ದಾರೆ.
‘ನಾವು ಬೆಂಗಳೂರು ಮೂಲದವರು. ಅಮೆರಿಕೆಯ ಅರಿಜೋನಾ ಪ್ರಾಂತ್ಯದಲ್ಲಿ ನೆಲೆಸಿದ್ದೇವೆ. ನಮ್ಮ ಹುಡುಗರು ಅಲ್ಲಿ ವ್ಯಾಸಂಗ ಮಾಡುತ್ತಾ ಟೇಕ್ವಾಂಡೋ ಕೂಡ ಕಲಿಯುತ್ತಿದ್ದಾರೆ. ತಾವು ಕಲಿತ ವಿದ್ಯೆಯನ್ನು ಭಾರತೀಯ ಹೆಣ್ಣು ಮಕ್ಕಳಿಗೆ ಕಲಿಸಿ ಆತ್ಮ ರಕ್ಷಣೆ ಮತ್ತು ಆತ್ಮಾಭಿಮಾನ ಬೆಳೆಸುವ ಉದ್ದೇಶ ಹೊಂದಿದ್ದಾರೆ. ನಮಗೆ ‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ ಪರಿಚಿತರಾಗಿ, ಮುತ್ತೂರಿನ ಶಾಲಾ ಮಕ್ಕಳಿಗೆ ಆತ್ಮರಕ್ಷಣಾ ಕಲೆಯನ್ನು ಕಲಿಸಲು ಕಳೆದ ವರ್ಷ ಕೋರಿದರು. ಹಾಗಾಗಿ ನಾವು ಕಳೆದ ವರ್ಷ ಮುತ್ತೂರಿಗೆ ಬಂದಿದ್ದೆವು. ಈ ಬಾರಿ ಮಳ್ಳೂರು ಮತ್ತು ಮುತ್ತೂರು ಎರಡೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಂಗಳೂರಿನಿಂದ ಬಂದು ಕಲಿಸುತ್ತಿದ್ದಾರೆ. ಅಮೆರಿಕೆಯಲ್ಲಿ ಜೂನ್ ಮತ್ತು ಜುಲೈ ತಿಂಗಳು ರಜೆ ಇರುವ ಕಾರಣ ಇಲ್ಲಿಗೆ ಬರುತ್ತೇವೆ. ಮುಂದಿನ ದಿನಗಳಲ್ಲಿ ಅವನ ಇನ್ನಷ್ಟು ಅಮೆರಿಕೆಯ ಸ್ನೇಹಿತರೊಂದಿಗೆ ಬಂದು ಭಾರತೀಯ ಗ್ರಾಮೀಣ ಮಕ್ಕಳಿಗೆ ಅವರುಗಳು ಕಲಿತ ವಿದ್ಯೆಯನ್ನು ಕಲಿಸುವ ಉದ್ದೇಶ ಹೊಂದಿದ್ದಾರೆ’ ಎಂದು ಟೇಕ್ವಾಂಡೋ ಕಲಿಸುತ್ತಿರುವ ರೋಹಿತ್ ಮತ್ತು ಸಂಜಿತ್ ಅವರ ತಾಯಿ ಜಯಭಾರತಿ ತಿಳಿಸಿದರು.
‘ಭಾರತೀಯತೆಯ ಬೇರನ್ನು ಮರೆಯದೆ ತಾವು ಕಲಿತ ಆತ್ಮರಕ್ಷಣಾ ವಿದ್ಯೆಯನ್ನು ನಮ್ಮ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಲಿಸಲು ಅಮೆರಿಕೆಯಿಂದ ಬಂದ ಈ ಕುಟುಂಬದವರು ಮಾದರಿಯಾಗಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ವಹಿಸಿ ಅವರಿಗೆ ಸ್ವತಂತ್ರ್ಯ ಮನೋಭಾವ ಮತ್ತು ಆತ್ಮ ರಕ್ಷಣೆಯ ತಿಳುವಳಿಕೆಯನ್ನು ಮೂಡಿಸುತ್ತಿದ್ದಾರೆ’ ಎಂದು ಮಳ್ಳೂರು ಸರ್ಕಾರಿ ಶಾಲೆಯ ಮುಖ್ಯಶಿಕ್ಷಕಿ ಶಕುಂತಲಮ್ಮ ತಿಳಿಸಿದರು.
‘ನಮ್ಮ ಮುತ್ತೂರು’ ಸಂಸ್ಥೆಯ ಉಷಾಶೆಟ್ಟಿ, ಮುಖ್ಯ ಶಿಕ್ಷಕಿ ಶಕುಂತಲಮ್ಮ, ದೈಹಿಕ ಶಿಕ್ಷಕ ಅಶ್ವತ್ಥನಾರಾಯಣ, ಸಹಶೀಕ್ಷಕರಾದ ಗಿರಿಜಮ್ಮ, ಅರುಣ, ಸೀನಪ್ಪ ಈ ಸಂದರ್ಭದಲ್ಲಿ ಹಾಜರಿದ್ದರು.