ಕೊರೊನಾ ಭೀತಿಯಿಂದ ಮಸೀದಿ, ಚರ್ಚು ಮತ್ತು ದೇವಾಲಯಗಳನ್ನು ಜನರು ಸೇರುವುದನ್ನು ನಿರ್ಬಂಧಿಸಿದ್ದರೂ ತಾಲ್ಲೂಕಿನ ಜಂಗಮಕೋಟೆಯ ಎರಡು ಮಸೀದಿಗಳಲ್ಲಿ ನೂರಾರು ಮಂದಿ ಸೇರಿ ಪ್ರಾರ್ಥನೆ ಮಾಡುತ್ತಿರುವ ದೂರು ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ಕೆ.ಅರುಂಧತಿ ಅವರು ಮಸೀದಿ ಮುಖ್ಯಸ್ಥರನ್ನು ನಾಡಕಚೇರಿಗೆ ಕರೆಸಿ ಶನಿವಾರ ಎಚ್ಚರಿಕೆ ನೀಡಿದರು.
ಕೊರೋನಾ ರೋಗದ ಬಗ್ಗೆ ಎಲ್ಲಾ ರೀತಿಯಲ್ಲೂ ಮಾಹಿತಿ ನೀಡಲಾಗುತ್ತಿದೆ. ಜನರು ಗುಂಪುಗೂಡಬಾರದು ಎಂದು ತಿಳುವಳಿಕೆ ನೀಡಿದ್ದರೂ ಮಸೀದಿಗಳಲ್ಲಿ ಏಕೆ ಬಂದು ಪ್ರಾಥನೆ ನಡೆಸಲು ಅವಕಾಶ ಮಾಡಿಕೊಟ್ಟಿರುವಿರಿ. ಅನಾಹುತ ಸಂಭವಿಸುವ ಮುನ್ನ ಎಚ್ಚರಿಕೆ ವಹಿಸಬೇಕೆಂದು ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ನೀವು ಸಹಕರಿಸದಿದ್ದರೆ ಹೇಗೆ ಎಂದು ಅವರಿಗೆ ಬುದ್ದಿವಾದ ಹೇಳಿದರು.
ಮಸೀದಿ ಮುಖಂಡರು, ಇನ್ನು ಮುಂದೆ ಜನರು ಮಸೀದಿಗೆ ಬರದೇ ಮನೆಯಲ್ಲಿ ಪ್ರಾರ್ಥಿಸಲು ತಿಳುವಳಿಕೆ ನೀಡುತ್ತೇವೆ. ಜನರು ಗುಂಪುಗೂಡಬಾರದೆಂದು ತಿಳಿಸುವುದಾಗಿ ಹೇಳಿದರು.