ವಾಲ್ಮೀಕಿ ಜಾತ್ರಾ ಮಹೋತ್ಸವ ಇಡೀ ದೇಶದ ಗಮನ ಸೆಳೆಯುವ ಜೊತೆಗೆ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಪಡೆಯಲು ವೇದಿಕೆಯಾಗಬೇಕು ಎಂದು ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಸ್ವಾಮಿ ಹೇಳಿದರು.
ಮುಂಬರುವ ಫೆಬ್ರುವರಿ ೮ ಮತ್ತು ೯ ರಂದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿರುವ ರಾಜನಹಳ್ಳಿಯ ಮಹರ್ಷಿ ವಾಲ್ಮೀಕಿ ಗುರುಪೀಠದಲ್ಲಿ ಆಯೋಜಿಸಿರುವ ವಾಲ್ಮೀಕಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ನಗರದ ಶ್ರೀ ಮಹರ್ಷಿ ವಾಲ್ಮೀಕಿ ದೇವಾಲಯದ ಆವರಣದಲ್ಲಿ ಸಮುದಾಯದ ಮುಖಂಡರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ರಾಜ್ಯದ ವಿವಿದೆಡೆಯಿಂದ ಸುಮಾರು ೩ ಲಕ್ಷಕ್ಕೂ ಹೆಚ್ಚು ಜನ ಆಗಮಿಸುವ ನಿರೀಕ್ಷೆಯಿದ್ದು ನಾಯಕ ಸಮಾಜಕ್ಕೆ ಶೇ ೭.೫ ಮೀಸಲಾತಿ ಕಲ್ಪಿಸುವುದೂ ಸೇರಿದಂತೆ ಅಭಿವೃದ್ಧಿಯಲ್ಲಿ ಹಿಂದುಳಿದಿರುವ ನಾಯಕ ಸಮುದಾಯದ ನೋವು ಸರ್ಕಾರಗಳಿಗೆ ತಿಳಿಯುವಂತೆ ಮಾಡಬೇಕಾಗಿದೆ ಎಂದರು.
ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಬಾದ ಜಿಲ್ಲಾಧ್ಯಕ್ಷ ಬಂಕ್ ಮುನಿಯಪ್ಪ ಮಾತನಾಡಿ, ಸಮುದಾಯದ ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ಗುರುಪೀಠಕ್ಕೆ ಭೇಟಿ ನೀಡುವುದನ್ನು ರೂಡಿಸಿಕೊಳ್ಳಬೇಕು. ಇದರಿಂದ ರಾಜ್ಯಾದ್ಯಂತ ಇರುವ ಸಮುದಾಯದವರು ಒಗ್ಗಟ್ಟಾಗಿರಲು ಸಾಧ್ಯವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಜಾತ್ರಾ ಮಹೋತ್ಸವದ ಆಚರಣಾ ಸಮಿತಿ ರಚಿಸಿಕೊಂಡು ತಾಲ್ಲೂಕಿನಾದ್ಯಂತ ಇರುವ ವಾಲ್ಮೀಕಿ ಸಮುದಾಯದ ಪ್ರತಿ ಮನೆಗೂ ಜಾತ್ರೆಗ ಆಹ್ವಾನ ನೀಡುವುದೂ ಸೇರಿದಂತೆ ಅವರಿಂದ ದೇಣಿಗೆ ಸಂಗ್ರಹಿಸಿ ಗುರುಪೀಠಕ್ಕೆ ತಲುಪಿಸಲು ತಾಲ್ಲೂಕು ಸಮಿತಿಗೆ ಜವಾಬ್ದಾರಿ ನೀಡಲಾಯಿತು.
ದೇಣಿಗೆ ನೀಡುವವರ ಹೆಸರು, ಗೋತ್ರ ಹಾಗು ದೂರವಾಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿದಲ್ಲಿ ಮುಂದಿನ ದಿನಗಳಲ್ಲಿ ನಮ್ಮದೇ ಮಹರ್ಷಿ ವಾಲ್ಮೀಕಿ ವೆಬ್‌ಸೈಟಿನಲ್ಲಿ ಆಯಾ ತಾಲ್ಲೂಕಿನಲ್ಲಿರುವ ವಾಲ್ಮೀಕಿ ಸಮುದಾಯದ ಜನಸಂಖ್ಯೆಯ ಹಾಗೂ ವಿವರಗಳನ್ನು ದಾಖಲಿಸಲಾಗುವುದು ಎಂದರು.
ಪ್ರತಿ ತಾಲ್ಲೂಕಿನಿಂದಲೂ ಜಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಾರ್ಯದರ್ಶಿ ಬಸವರಾಜ ನಾಯಕ್, ಶ್ರೀನಿವಾಸಪುರದ ಗೋವಿಂದಸ್ವಾಮಿ, ಚಿಂತಾಮಣಿಯ ಅಗ್ರಹಾರ ಮುರಳಿ, ತಾಲ್ಲೂಕಿನ ಮುಖಂಡರಾದ ಎನ್.ಮುನಿಯಪ್ಪ, ತಾಲ್ಲೂಕು ಘಟಕ, ಯುವಘಟಕ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಹಾಜರಿದ್ದರು.