ನಗರದ ಕಂದಾಯ ಭವನದ ಮುಂಭಾಗ ಮಂಗಳವಾರ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ರವರ 114ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ವಿ.ಮುನಿಯಪ್ಪ ಮಾತನಾಡಿದರು.
ಗಾಂಧೀಜಿಯವರ ಜೀವನವೇ ಮಾದರಿ. ಅದಕ್ಕಾಗಿಯೇ ಅವರು ‘ನನ್ನ ಬದುಕೇ ನನ್ನ ಸಂದೇಶ’ ಎಂದು ಹೇಳಿದ್ದರು. ಬದುಕು, ಬರಹ, ಮಾತು ಎಲ್ಲವೂ ಒಂದೇ ಆಗಿದ್ದಂತಹ ನಮ್ಮ ನಡುವಿನ ಬಹು ದೊಡ್ಡ ಸಾಕ್ಷಿ ಪ್ರಜ್ಞೆ ಮಹಾತ್ಮ ಗಾಂಧೀಜಿ ಎಂದು ಅವರು ತಿಳಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಅಹಿಂಸೆಯ ಅಸ್ತ್ರ ಹಿಡಿದು ಇಡಿಯ ರಾಷ್ಟ್ರವನ್ನೇ ಸ್ವತಂತ್ರ ಸಂಗ್ರಾಮದಲ್ಲಿ ಭಾಗವಹಿಸಲು ಪ್ರೇರೇಪಿಸಿ ಯಶಸ್ವಿಯಾದ ಬಳಿಕವೂ ಎಲ್ಲವೂ ಭಗವಂತನ ಕೃಪೆ ಎಂದು ಭಾವಿಸಿ ತಮ್ಮ ಸರಳ ಬದುಕನ್ನು ಮುಂದುವರೆಸಿದ್ದ ಮಹಾತ್ಮ ಗಾಂಧೀಜಿ ಎಂಬ ಮಹಾನ್ ಚೇತನ ಇಂದಿಗೂ ಮಾದರಿ ನಾಯಕರಾಗಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೇ ಇಡಿಯ ವಿಶ್ವದ ಹಲವು ರಾಷ್ಟ್ರಗಳು ಗಾಂಧೀಜಿಯವರಿಗೆ ಆಯಾ ದೇಶದ ಉನ್ನತ ಗೌರವವನ್ನು ನೀಡಿ ಗೌರವಿಸಿವೆ.
ಗಾಂಧಿಜೀ ಹೇಳಿದ್ದು ಸಹ ಶ್ರಮ ಸಂಸ್ಕ್ರತಿ. ಇವತ್ತು ಸರಕಾರಗಳು ಗ್ರಾಮಗಳಲ್ಲಿ ಜಾರಿಗೆ ತಂದಿರುವ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸಹ ಗಾಂಧೀಜಿ ತತ್ತ್ವಗಳ ಆಚರಣೆಯ ಮುಖ್ಯ ಭಾಗವಾಗಿದೆ. ಅಂದು ಗಾಂಧೀಜಿ ಅತಿಯಾದ ಯಂತ್ರ ಬಳಕೆ ವಿರೋಧಿಸಿದ್ದರು. ಇವತ್ತು ಅದು ನಿಜವಾಗುತ್ತಿದೆ. ಸರಕಾರಗಳು ಇದನ್ನು ಅರಿತೇ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಂತ್ರಗಳ ಬಳಕೆಯನ್ನು ನಿಷೇಧಿಸಿದೆ. ಅಷ್ಟರ ಮಟ್ಟಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ಇಲ್ಲಿ ಗಾಂಧೀ ತತ್ತ್ವ ಆಚರಣೆಗೆ ಬಂದಿದೆ.
ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯನ್ನು ಅನ್ವರ್ಥನಾಮವಾಗಿದ್ದಾರೆ. ಅವರದು ಸರಳ ಉಡುಪು, ಮೃದು ನುಡಿ, ಸ್ವಲ್ಪವೂ ಗತ್ತು, ದರ್ಪವಿಲ್ಲದೇ ಅಧಿಕಾರವನ್ನು ಬಯಸದೇ ದೇಶಕ್ಕಾಗಿ ಕೆಲಸ ಮಾಡಿದ ಮಹಾನ್ ವ್ಯಕ್ತಿ ಎಂದರು.
ನಿವೃತ್ತ ಪ್ರಾಂಶುಪಾಲ ಮಹಮ್ಮದ್‌ಖಾಸಿಂ ಅವರು ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ದೃಷ್ಟಾಂತಗಳನ್ನು ವಿವರಿಸಿ ಅದರ ಮೂಲಕ ನಮಗೆ ಸಿಗುವ ಸಂದೇಶದ ಬಗ್ಗೆ ತಿಳಿಸಿದರು.
ಶಿಕ್ಷಕ ಅಜಗಜಾನನಮೂರ್ತಿ ನೇತೃತ್ವದಲ್ಲಿ ಶಾಲಾ ವಿದ್ಯಾರ್ಥಿಗಳು ಭಗವದ್ಗೀತೆ ಪಾರಾಯಣ, ಖುರಾನ್ ಪಠಣ ಮತ್ತು ಬೈಬಲ್ ಪ್ರವಚನ ಮಾಡಿದರು. ‘ರಘುಪತಿ ರಾಘವ ರಾಜಾರಾಂ…’ ಭಜನೆಯನ್ನು ಹಾಡಿಸಲಾಯಿತು. ಕಲಾವಿದ ಶಿವರಾಜ್ ಹಾಗೂ ಗಾಂಧಿ ವೇಷಧಾರಿ ಮಕ್ಕಳನ್ನು ಸನ್ಮಾನಿಸಲಾಯಿತು. ಅಕ್ರಮ ಸಕ್ರಮ ಯೋಜನೆಯ ಫಲಾನುಭವಿಗಳಿಗೆ ಹಕ್ಕುಪತ್ರ ಹಾಗೂ ಅನಿಲಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಸಿಲಿಂಡರ್ ಹಾಗೂ ಸ್ಟೌ ವಿತರಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯನಿರ್ವಾಹಣಾಧಿಕಾರಿ ವೆಂಕಟೇಶ್, ನಗರಸಭೆ ಅಧ್ಯಕ್ಷ ಅಫ್ಸರ್ ಪಾಷ, ಉಪಾಧ್ಯಕ್ಷೆ ಪ್ರಭಾವತಿ ಸುರೇಶ್, ಆಯುಕ್ತ ಚಲಪತಿ, ಕೃಷಿ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಸದಸ್ಯ ವಿ.ಸುಬ್ರಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಬಾಬು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಸಿಡಿಪಿಒ ಲಕ್ಷ್ಮೀದೇವಮ್ಮ, ರೈತ ಮುಖಂಡರು, ಅಧಿಕಾರಿಗಳು, ಶಿಕ್ಷಕರು ಹಾಜರಿದ್ದರು.