Home News ಮಹಿಳಾ ಸ್ವಸಹಾಯ ಸಂಘಗಳಿಗೆ 2.5 ಕೋಟಿ ರೂಗಳ ಸಾಲ ವಿತರಣೆ

ಮಹಿಳಾ ಸ್ವಸಹಾಯ ಸಂಘಗಳಿಗೆ 2.5 ಕೋಟಿ ರೂಗಳ ಸಾಲ ವಿತರಣೆ

0

ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಸಾಲ ವಿತರಿಸುತ್ತಿದ್ದೇವೆ. ಸ್ವ ಸಹಾಯ ಸಂಘಗಳ ಪದಾಧಿಕಾರಿಗಳು, ಬ್ಯಾಂಕುಗಳಿಂದ ಪಡೆದುಕೊಳ್ಳುವಂತಹ ಸಾಲಗಳನ್ನು ನಿಗದಿತ ಉದ್ದೇಶಗಳಿಗೆ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಮತ್ತಷ್ಟು ಅಭಿವೃದ್ದಿಯಾಗಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ತಿಳಿಸಿದರು.
ನಗರದ ಅಶೋಕರಸ್ತೆಯಲ್ಲಿ ಡಿಸಿಸಿ ಬ್ಯಾಂಕ್ ಮತ್ತು ಶಿಡ್ಲಘಟ್ಟ ಟೌನ್ ರೇಷ್ಮೆ ಬೆಳೆಗಾರರ ಸಂಘ ಹಾಗೂ ರೈತರ ಸಹಕಾರ ಬ್ಯಾಂಕ್ ವತಿಯಿಂದ ಶುಕ್ರವಾರ ಆಯೋಜಿಸಲಾಗಿದ್ದ ಸ್ವ ಸಹಾಯ ಸಂಘಗಳಿಗೆ ಸಾಲ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಮಾತ್ರ ಕುಟುಂಬ ಸುಸ್ಥಿತಿಯಲ್ಲಿರುತ್ತದೆ. ಆ ಮೂಲಕ ಗ್ರಾಮೀಣ ಬದುಕನ್ನು ಹಸನಾಗಿಸುವುದು ಈ ಸಾಲ ಸೌಲಭ್ಯದ ಹಿಂದಿನ ಉದ್ದೇಶವಾಗಿದೆ. ಸರಿಯಾಗಿ ಲೆಕ್ಕಪತ್ರವನ್ನು ಬರೆಯುತ್ತಾ, ಸಮರ್ಪಕವಾಗಿ ಸಾಲದ ಹಣವನ್ನು ಸದ್ವಿನಿಯೋಗ ಮಾಡಿಕೊಂಡಲ್ಲಿ ಸ್ವಸಹಾಯ ಸಂಘಗಳ ಗ್ರಾಮೀಣ ಚಿತ್ರಣವನ್ನು ಬದಲಿಸಬಹುದು ಎಂದು ಹೇಳಿದರು.
ಇಂದು ನೀಡಲಾಗುತ್ತಿರುವ ಬಡ್ಡಿ ರಹಿತ ಸಾಲ ವಿತರಣೆ ಯೋಜನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಜಾರಿಗೆ ಬಂದಿತ್ತು. ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಿದವರನ್ನು ಜನ ಬೆಂಬಲಿಸಬೇಕೇ ಹೊರತು ಚುನಾವಣೆ ವೇಳೆಯಲ್ಲಿ ಯಾರೋ ನೀಡುವ ಹಣಕ್ಕೆ ಮತ ಮಾರಿಕೊಳ್ಳಬೇಡಿ ಎಂದರು.
ಶಾಸಕ ವಿ.ಮುನಿಯಪ್ಪ ಮಾತನಾಡಿ, ಈ ಹಿಂದೆ ಸಾಲ ಪಡೆಯಬೇಕಾದರೆ ನಮ್ಮಲ್ಲಿರುವ ಬಂಗಾರವನ್ನು ಅಡವಿಟ್ಟು ಅದರ ಮೇಲೆ ಬಡ್ಡಿ ನೀಡಬೇಕಾಗಿತ್ತು. ಆದರೆ ಇದೀಗ ಯಾವುದೇ ಗಿರವಿ, ಬಡ್ಡಿಯಿಲ್ಲದೇ ಸರ್ಕಾರ ಸಾಲ ನೀಡುತ್ತಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಇದೀಗ ೪೫ ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಲು ಮುಂದಾಗಿದೆ. ಉಳಿದಂತೆ ಹಿಂದಿನ ಸಕಾರ ಜಾರಿಗೆ ತಂದಿದ್ದಂತಹ ಅನ್ನಬಾಗ್ಯ, ಕ್ಷೀರಭಾಗ್ಯ ಯೋಜನೆಗಳು ಸೇರಿದಂತೆ ಬಡ್ಡಿರಹಿತ ಸಾಲ ವಿತರಣೆ ಯೋಜನೆ ಮುಂದುವರೆಸಿದೆ. ಇದರ ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ಆರ್ಥಿಕವಾಗಿ ಮುಂದುವರೆಯಬೇಕು ಎಂದರು.
ಈ ಸಂದರ್ಭದಲ್ಲಿ ಸುಮಾರು ೮೫ ಮಹಿಳಾ ಸ್ವ ಸಹಾಯ ಸಂಘಗಳಿಗೆ ಒಟ್ಟು ೨ ಕೋಟಿ ೫೦ ಲಕ್ಷ ರೂ ಬಡ್ಡಿ ರಹಿತ ಸಾಲ ವಿತರಿಸಲಾಯಿತು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎ.ನಾಗರಾಜ್, ಕೆ.ಗುಡಿಯಪ್ಪ, ಮುನಿಕೃಷ್ಣಪ್ಪ, ಮಳ್ಳೂರು ಸಹಕಾರ ಸಂಘದ ಅಧ್ಯಕ್ಷ ರಾಮರೆಡ್ಡಿ, ಟೌನ್ ಎಸ್ ಎಫ್ ಸಿ ಎಸ್ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ನಿರ್ದೇಶಕರಾದ ನರಸಿಂಹಮೂರ್ತಿ, ವೇಣುಗೋಪಾಲ್, ಶೆಟ್ಟಹಳ್ಳಿ ರಾಮಚಂದ್ರಪ್ಪ, ವೆಂಕಟೆಶಪ್ಪ, ನರಸಿಂಹಪ್ಪ, ನಾರಾಯಣಪ್ಪ, ನೀಲಮ್ಮ, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಆನಂದ್ ಕಾರ್ಯಕ್ರಮದಲ್ಲಿ ಹಾಜರಿದ್ದರು.

error: Content is protected !!