Home News ಮಹಿಳೆಯರ ಆರ್ಥಿಕ ಬಲವರ್ಧನೆಗಾಗಿ ಚೆಕ್ ವಿತರಣೆ

ಮಹಿಳೆಯರ ಆರ್ಥಿಕ ಬಲವರ್ಧನೆಗಾಗಿ ಚೆಕ್ ವಿತರಣೆ

0

ಸರ್ಕಾರದಿಂದ ಮಹಿಳಾ ಬಲವರ್ಧನೆಗೆ ಉತ್ತಮ ಯೋಜನೆಗಳು ರೂಪಿಸಲಾಗಿದ್ದು, ಗ್ರಾಮೀಣ ಪ್ರದೇಶದ ಮಹಿಳೆಯರು ಈ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕೆಂದು ಪಶು ವೈದ್ಯಾಧಿಕಾರಿ ಡಾ.ನಟರಾಜ್‌ ತಿಳಿಸಿದರು.
ತಾಲ್ಲೂಕಿನ ದಿಬ್ಬೂರಹಳ್ಳಿ ಪಶುವೈದ್ಯ ಆಸ್ಪತ್ರೆಯ ಬಳಿ ಈಚೆಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಅಡಿಯಲ್ಲಿ ಮಹಿಳೆಯರ ಆರ್ಥಿಕ ಬಲವರ್ಧನೆಗಾಗಿ ೭.೫೦೦ ರೂ ಗಳ ಚೆಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಈ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯನ್ನು (ಆರ್.ಕೆ.ವಿ.ವೈ) ಅನುಷ್ಟಾನಗೊಳಿಸಲಾಗಿದ್ದು, ಇದರ ಮೂಲಕ ದೇವದಾಸಿಯರು, ವಿಧವೆಯರು, ಜೀವನಾಧಾರವಿಲ್ಲದ ನಿರ್ಗತಿಕ, ಸಂಕಷ್ಟಕ್ಕೊಳಗಾದ, ಕೂಲಿ ಕಾರ್ಮಿಕ ಮಹಿಳೆಯರು ಫಲಾನುಭವಿಗಳಾಗಿದ್ದಾರೆ. ಇವರಿಗೆ ೫೦,೦೦೦ ರೂಗಳಲ್ಲಿ ತಲಾ ಒಂದು ಹಾಲು ಕರೆಯುವ ಹಸು ಅಥವಾ ಎಮ್ಮೆಯನ್ನು, ಸಾಮಾನ್ಯ ಮಹಿಳೆಯರಿಗೆ ೨೫,೦೦೦ ರೂ ಸಹಾಯಧನ ಹಾಗೂ ೨೫,೦೦೦ ರೂ ಬ್ಯಾಂಕಿನ ಸಾಲದ ಮೂಲಕ ಉತ್ತಮ ಜೀವನ ನಡೆಸಲು ಅನುಕೂಲ ಮಾಡಿಕೊಡಲು ಯೋಜಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮಹಿಳೆಯರಿಗೆ ಶೇ. ೭೫ ರಷ್ಟು ಸಹಾಯಧನ ನೀಡಲಾಗುವುದು ಎಂದು ವಿವರಿಸಿದರು.
ಪಶು ಸಂಗೋಪನಾ ಇಲಾಖೆಯ ನರಸಿಂಹಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುಬ್ಬಣ್ಣ, ಮಾಜಿ ಸದಸ್ಯ ಡಿ.ಎನ್‌.ರಾಜು, ಸದಸ್ಯರಾದ ಪ್ರಸನ್ನಕುಮಾರ್, ಡಿ. ವಿ ಶ್ರೀರಂಗಪ್ಪ, ಅಂಗನವಾಡಿ ಕಾರ್ಯಕರ್ತೆ ಅಶ್ವತ್ತಮ್ಮ ಹಾಜರಿದ್ದರು.

error: Content is protected !!