ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ತಾಲ್ಲೂಕು ವಾಲ್ಮೀಕ ನಾಯಕ ಮಹಾಸಭಾ ಹಾಗೂ ವಾಲ್ಮೀಕಿ ಯುವಸೇನೆ ವತಿಯಿಂದ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿದರು.
ಪರಿಶಿಷ್ಠ ವರ್ಗದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಶೇ ೭.೫ ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಚಾಲನೆ ನೀಡಿರುವ ಬೃಹತ್ ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು ಘಟಕ ಹಾಗೂ ವಾಲ್ಮೀಕಿ ಯುವಸೇನೆಯ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿಗಳು ಕಳೆದ ಜೂನ್ ೯ ರಂದು ಪಾದಯಾತ್ರೆಗೆ ಚಾಲನೆ ನೀಡಿದ್ದು ದಾವಣಗೆರೆ, ಚಿತ್ರದುರ್ಗ, ಶಿರಾ ಮೂಲಕ ಮಂಗಳವಾರ ತುಮಕೂರಿಗೆ ಆಗಮಿಸಿದ್ದಾರೆ. ಎಲ್ಲಾ ಕಡೆ ಸಮುದಾಯದ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಪಾದಯಾತ್ರೆ ಬುಧವಾರ ನೆಲಮಂಗಲಕ್ಕೆ ತಲುಪಲಿದ್ದು ತಾಲ್ಲೂಕು ವಾಲ್ಮೀಕಿ ಸಂಘದ ನೂರಾರು ಪದಾಧಿಕಾರಿಗಳು ಅಲ್ಲಿಂದ ಸ್ವಾಮೀಜಿಗಳ ಪಾದಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಲಿದ್ದೇವೆ ಎಂದರು.
ತಾಲ್ಲೂಕು ವಾಲ್ಮೀಕಿ ಯುವಸೇನೆಯ ಅಧ್ಯಕ್ಷ ಮುತ್ತೂರು ವೆಂಕಟೇಶ್ ಮಾತನಾಡಿ, ಕಳೆದ ಹತ್ತು ದಿನಗಳಿಂದ ನಮ್ಮ ಸಮುದಾಯದ ಸ್ವಾಮೀಜಿಗಳು ಪಾದಯಾತ್ರೆ ಮಾಡುತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಳ್ಳದಿರುವುದು ದುರಂತ. ರಾಜ್ಯಾದ್ಯಂತ ಸುಮಾರು ೭೦ ಲಕ್ಷಕ್ಕೂ ಹೆಚ್ಚು ಜನಸಂಖ್ಯೆಯಿರುವ ವಾಲ್ಮೀಕಿ ಸಮುದಾಯಕ್ಕೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಸಿಗುತ್ತಿಲ್ಲ. ಶೇ ೩ ರಷ್ಟು ಮಾತ್ರ ಮೀಸಲಾತಿ ಸಿಗುತ್ತಿದ್ದು ಅದನ್ನು ಶೇ ೭.೫ ರಷ್ಟು ಹೆಚ್ಚಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸ್ವಾಮೀಜಿಗಳು ಕೈಗೊಂಡಿರುವ ಪಾದಯಾತ್ರೆಯಲ್ಲಿ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ತಾಲ್ಲೂಕು ಪದಾಧಿಕಾರಿಗಳಾದ ಶ್ರೀನಾಥ್, ಕುಂದಲಗುರ್ಕಿ ಮುನಿಯಪ್ಪ, ಮುನಿರಾಜು, ಯುವಸೇನೆಯ ಸಿ.ಆನಂದ, ನರಸಿಂಹಪ್ಪ ಹಾಜರಿದ್ದರು.