ಭಾರತೀಯ ಸಂಸ್ಕೃತಿಯ ಪ್ರತೀಕವಾದ ರಂಗೋಲಿ ಕಲೆ ಉಳಿವಿಗೆ ಮಹಿಳೆಯರು ಮುಂದಾಗಬೇಕು. ಮುಂದಿನ ಪೀಳಿಗೆಗೆ ಪಾರಂಪರಿಕ ಕಲೆ ಪರಿಚಯಿಸಬೇಕು ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮಂಗಳಗೌರಮ್ಮ ಹೇಳಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗುರುವಾರ ಲೋಕ ಶಿಕ್ಷಣ ನಿರ್ದೇಶನಾಲಯ, ರಾಜ್ಯ ಸಾಕ್ಷರತ ಮಿಷನ್ ಪ್ರಾಧಿಕಾರ ಹಾಗೂ ಮೇಲೂರು ಗ್ರಾಮ ಲೋಕ ಶಿಕ್ಷಣ ಸಮಿತಿಯ ಸಹಯೋಗದಲ್ಲಿ ಆಯೋಜನೆ ಮಾಡಲಾಗಿದ್ದ ರಂಗೋಲೆ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡಿನ ವೈವಿಧ್ಯಮಯ ಸಂಸ್ಕೃತಿಯನ್ನು ಬಿಂಬಿಸುವಂತಹ ದೇಶೀಯ ಕಲೆಗೆ ಮೊದಲನೇ ಆಧ್ಯತೆಯನ್ನು ನೀಡಬೇಕು. ಇತ್ತಿಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡು ಪುರುಷರಿಗಿಂತ ಕಡಿಮೆಯಿಲ್ಲವೆಂಬುದನ್ನು ಸಾಬೀತುಪಡಿಸಬೇಕು. ಇತ್ತಿಚೆಗೆ ಹೆಚ್ಚಾಗುತ್ತಿರುವ ಟಿ.ವಿ.ಸಂಸ್ಕೃತಿಯಿಂದಾಗಿ ದೇಶೀಯ ಸಂಸ್ಕೃತಿಯಿಂದ ಮಹಿಳೆಯರು ವಿಮುಖರಾಗುತ್ತಿದ್ದು, ಇಂತಹ ರಾಷ್ಟ್ರೀಯ ಹಬ್ಬಗಳ ಆಚರಣೆ ಕಾರ್ಯಕ್ರಮಗಳಲ್ಲಿ ಅವಕಾಶಗಳನ್ನು ಕಲ್ಪಿಸಿಕೊಟ್ಟು ಅವರಲ್ಲಿರುವ ಕಲೆಯನ್ನು ಪ್ರೋತ್ಸಾಹಪಡಿಸಬೇಕು ಎಂದರು.
ಲೋಕ ಶಿಕ್ಷಣ ಸಮಿತಿ ಪ್ರೇರಕಿ ರಾಧಮ್ಮ ಮಾತನಾಡಿ, ಮಹಿಳೆಯರಲ್ಲಿ ಅಕ್ಷರ ಜ್ಞಾನದ ಅವಶ್ಯಕತೆಯ ಬಗ್ಗೆ ತಿಳಿಸಿಕೊಡುವುದು, ಹಾಗೂ ಅವರನ್ನು ಅಕ್ಷರಸ್ಥರನ್ನಾಗಿ ಮಾಡಿ, ಸಾಮಾಜಿಕ ಪ್ರಜ್ಞೆ ಮೂಡಿಸುವಂತಹ ಕಾರ್ಯವನ್ನು ಲೋಕ ಶಿಕ್ಷಣ ಸಮಿತಿಯ ಮೂಲಕ ಮಾಡಲಾಗುತ್ತಿದೆ. ಮೇಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲೂರು, ಗಂಗನಹಳ್ಳಿ, ಕಂಬದಹಳ್ಳಿ, ಚೌಡಸಂದ್ರ ಗ್ರಾಮಗಳಿಂದ ನೂರಾರು ಮಂದಿ ಮಹಿಳೆಯರಿಗೆ ತರಬೇತಿಗಳನ್ನು ನೀಡಲಾಗುತ್ತಿದೆ. ರಂಗೋಲೆಯಂತಹ ಕಲೆಯಿಂದ ಮಹಿಳೆಯರ ಮೆದುಳು ಹೆಚ್ಚು ಕ್ರೀಯಾಶೀಲವಾಗುವುದರ ಜೊತೆಗೆ ಏಕಾಗ್ರತೆಯನ್ನು ಉಂಟು ಮಾಡುತ್ತದೆ. ಇಂತಹ ಕಲೆಯನ್ನು ಮಕ್ಕಳು, ಮಹಿಳೆಯರು, ವೃಧ್ದರು ಸೇರಿದಂತೆ ಎಲ್ಲಾ ವಯೋಮಾನದ ಮಿತಿಯಿಲ್ಲದೆ ಕಲಿಯಬಹುದಾಗಿದೆ ಎಂದರು.
ಉಪಪ್ರೇರಕಿ ಎಸ್.ಎಂ.ಸರೋಜ, ಎಸ್.ರೇಣುಕಾ, ಶೋಭಾ, ಲತಾ, ಮುಂತಾದವರು ಹಾಜರಿದ್ದರು.
- Advertisement -
- Advertisement -
For Daily Updates
WhatsApp 'HI' to 7406303366
- Advertisement -
- Advertisement -







