Home News ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜು: ಕೆ.ಎಚ್.ಮುನಿಯಪ್ಪ

ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸಜ್ಜು: ಕೆ.ಎಚ್.ಮುನಿಯಪ್ಪ

0

ರಾಜ್ಯದಲ್ಲಿ ಕೆಪಿಸಿಸಿ ಪುನರ್ ರಚನೆ ಆಗಿದ್ದು ತಕ್ಷಣದಿಂದಲೆ ಪಕ್ಷದ ಕಾರ್ಯಕರ್ತರು ಸಂಘಟನೆಯೊಂದಿಗೆ ಚುನಾವಣೆಗೂ ಸಿದ್ದತೆ ಆಗಬೇಕಿದೆ ಎಂದು ಸಂಸದ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಕಾಂಗ್ರೆಸ್‌ನ ಕೇಂದ್ರ ಕಾರ್ಯಕಾರಣಿಯ ವಿಶೇಷ ಆಹ್ವಾನಿತರಾಗಿ ಆಯ್ಕೆ ಆದ ನಂತರ ನಗರಕ್ಕೆ ಭಾನುವಾರ ಆಗಮಿಸಿದ ಅವರು ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದರು.
ಪರಿಶಿಷ್ಟ ಜಾತಿಯ ಸತೀಶ್ ಜಾರಕಿ ಹೊಳೆಯವರನ್ನು ಎಐಸಿಸಿಯ ಕಾರ್ಯದರ್ಶಿಯನ್ನಾಗಿ, ನನ್ನನ್ನು ಕೇಂದ್ರ ಕಾರ್ಯಕಾರಿಣಿಯ ವಿಶೇಷ ಆಹ್ವಾನಿತರನ್ನಾಗಿ ನೇಮಿಸುವ ಮೂಲಕ ಎಲ್ಲ ಸಮುದಾಯಕ್ಕೂ ಪ್ರಾತಿನಿಧ್ಯ ನೀಡಲಾಗಿದೆ. ದಲಿತರ, ಹಿಂದುಳಿದ ವರ್ಗಗಳ ನಂತರ ಪಕ್ಷದ ಬೆನ್ನಿಗೆ ನಿಂತ ಅಲ್ಪಸಂಖ್ಯಾತ ಸಮುದಾಯಕ್ಕೆ ಆಧ್ಯತೆ ನೀಡಬೇಕೆಂದು ಹೈ ಕಮಾಂಡ್‌ನ ಗಮನ ಸೆಳೆದಿದ್ದು ಮುಂದಿನ ದಿನಗಳಲ್ಲಿ ಅಲ್ಪಸಂಖ್ಯಾತರಿಗೂ ಆಧ್ಯತೆ ನೀಡುವ ಕೆಲಸ ಆಗಲಿದೆ ಎಂದರು.
ಅನ್ನಭಾಗ್ಯ, ಕ್ಷೀರಭಾಗ್ಯ, ರೈತರಿಗೆ ಬಡ್ಡಿ ರಹಿತ ಸಾಲ ಸೇರಿದಂತೆ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಯೋಜನೆ ಹಾಗೂ ಸಾಧನೆಗಳೆ ನಮಗೆ ಶ್ರೀರಕ್ಷೆ ಆಗಲಿದ್ದು ಮುಂದಿನ ಚುನಾವಣೆಯಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ಚುನಾವಣೆ ಸಮಯದಲ್ಲಿ ನಮ್ಮ ಕಾಂಗ್ರೆಸ್ ಪಕ್ಷವು ಮತದಾರರಿಗೆ ನೀಡಿದ ಪ್ರಣಾಳಿಕೆಯಲ್ಲಿನ ಎಲ್ಲ ಅಂಶಗಳನ್ನು ಈಡೇರಿಸಿದ ಏಕೈಕ ಸರ್ಕಾರ ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ದಲಿತರು, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆ ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಈ ಅಂಶಗಳನ್ನೆ ಮತದಾರರ ಮುಂದೆ ಇಡುತ್ತೇವೆ.
ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲ ಪ್ರಯತ್ನಗಳನ್ನು ನಡೆಸುತ್ತೇವೆ ಎಂದು ಹೇಳಿದರು.
ಸಾಮಾನ್ಯವಾಗಿ ಯಾವುದೆ ಪಕ್ಷ ಅಧಿಕಾರದಲ್ಲಿದ್ದಾಗ ಅಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ೨-೩ ಸಾವಿರ ಅಂತರದಲ್ಲಿ ಆಡಳಿತ ಪಕ್ಷದ ಅಭ್ಯರ್ಥಿ ಗೆಲ್ಲುವುದು ಸಹಜ. ಆದರೆ ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ೧೦-೨೫ ಸಾವಿರ ಅಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ವಿಜಯ ಸಾಸಿದ್ದಾರೆ.
ಅಂದರೆ ನಮ್ಮ ರಾಜ್ಯದಲ್ಲಿನ ಮತದಾರರು ಆಡಳಿತ ಪಕ್ಷದ ಪರ ಇದ್ದಾರೆ ಎಂದೇ ಅರ್ಥ, ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದು ಶತಸಿದ್ದ ಎಂದು ಭವಿಷ್ಯ ನುಡಿದರು.
ಕಾಂಗ್ರೆಸ್‌ನ ಕೇಂದ್ರ ಕಾರ್ಯಕಾರಣಿಯ ವಿಶೇಷ ಆಹ್ವಾನಿತರಾಗಿ ಆಯ್ಕೆ ಆದ ನಂತರ ನಗರಕ್ಕೆ ಆಗಮಿಸಿದ ಕೆ.ಎಚ್.ಮುನಿಯಪ್ಪ ಅವರನ್ನು ತಾಲ್ಲೂಕು ಕಾಂಗ್ರೆಸ್ ಸಮಿತಿಯಿಂದ ಸನ್ಮಾನಿಸಲಾಯಿತು.
ಕೆ.ಪಿ.ಸಿ.ಸಿ ಉಪಾಧ್ಯಕ್ಷ ವಿ.ಮುನಿಯಪ್ಪ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಕೋಚಿಮುಲ್‌ನ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ, ಜಿಲ್ಲಾ ಕಾಂಗ್ರೆಸ್‌ನ ಕಾರ್ಯದರ್ಶಿ ಎಲ್.ಮಧು, ಆಹಾರ ನಿಗಮದ ನಿರ್ದೇಶಕ ಎ. ನಾಗರಾಜ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಶಂಕರ್, ಪಂಪ್ ನಾಗರಾಜ್, ಮಳಮಾಚನಹಳ್ಳಿ ರಾಮಾಂಜಿ, ರಾಜ್ ಕುಮಾರ್, ಶ್ರೀನಾಥ್, ಪ್ರಸನ್ನ ಹಾಜರಿದ್ದರು.
ಕೆರೆಗಳಿಗೆ ನೀರು ಹರಿದು ಬರಲಿದೆ: ಕೋಲಾರ ಭಾಗದ ಕೆರೆಗಳಿಗೆ ನೀರು ಹರಿಸುವ ಕೆ.ಸಿ.ವ್ಯಾಲಿಯ ಮೊದಲ ಹಂತದಲ್ಲಿ ನೀರು ಹರಿಸಲು ಆಗಸ್ಟ್‌ ೧೫ಕ್ಕೆ ಗಡುವು ನೀಡಿದ್ದು ಕನಿಷ್ಠ ಆಗಸ್ಟ್‌ ಅಂತ್ಯಕ್ಕಾದರೂ ಆ ಭಾಗದ ಕೆರೆಗಳಿಗೆ ನೀರು ಹರಿಯುವುದು ಖಚಿತ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ತಿಳಿಸಿದರು.
ಕೆಸಿ ವ್ಯಾಲಿ ಯೋಜನೆಯ ಕಾಮಗಾರಿಯನ್ನು ನಡೆಸುತ್ತಿರುವ ಕಂಪೆನಿಯವರಿಗೆ ನಾಗವಾರ- ಹೆಬ್ಬಾಳ ಯೋಜನೆಯ ಗುತ್ತಿಗೆಯನ್ನು ನೀಡಿದ್ದು ಮುಂದಿನ ತಿಂಗಳಲ್ಲಿ ಈ ಯೋಜನೆಗೆ ಗುದ್ದಲಿ ಪೂಜೆ ನೆರವೇರಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿದ್ದೇನೆ ಎಂದರು.
ನಾಗವಾರ -ಹೆಬ್ಬಾಳ ಯೋಜನೆಗೆ ಚಾಲನೆ ನೀಡಿದ ಮರು ದಿನದಿಂದ ೧ ವರ್ಷದೊಳಗೆ ಚಿಕ್ಕಬಳ್ಳಾಪುರದ ಗೋಪಾಲಕಷ್ಣ ಕೆರೆ, ಅಮಾನಿ ಕೆರೆ, ಅಮ್ಮನಕೆರೆ, ಬೆಳ್ಳೂಟಿ ಕೆರೆ, ಬದನಕೆರೆಗೆ ನೀರು ಹರಿಯಲಿದೆ ಎಂದು ವಿವರಿಸಿದರು.

error: Content is protected !!