Home News ‘ಮುಷ್ಠಿ ತುಂಬ ರಾಗಿ’ – ವಿದ್ಯಾರ್ಥಿಗಳಿಂದ 600 ಕೆಜಿ ರಾಗಿ ಸಂಗ್ರಹ

‘ಮುಷ್ಠಿ ತುಂಬ ರಾಗಿ’ – ವಿದ್ಯಾರ್ಥಿಗಳಿಂದ 600 ಕೆಜಿ ರಾಗಿ ಸಂಗ್ರಹ

0

ಸ್ವಂತಕ್ಕಿಂತ ಸೇವೆ ಅಮೂಲ್ಯವಾದದ್ದು ಎಂಬ ಧ್ಯೇಯವನ್ನು ಮಕ್ಕಳ ಮನದಲ್ಲಿ ತುಂಬುವ ಉದ್ದೇಶದಿಂದ ‘ಮುಷ್ಠಿ ತುಂಬ ರಾಗಿ’ ಯೋಜನೆಯನ್ನು ಶಾಲೆಯಲ್ಲಿ ಹಮ್ಮಿಕೊಂಡಿದ್ದಾಗಿ ಬಿ.ಎಂ.ವಿ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಎಲ್‌.ಕಾಳಪ್ಪ ತಿಳಿಸಿದರು.
ತಾಲ್ಲೂಕಿನ ಭಕ್ತರಹಳ್ಳಿ ಗ್ರಾಮದ ಬಿ.ಎಂ.ವಿ ವಿದ್ಯಾ ಸಂಸ್ಥೆಯಲ್ಲಿ ಗುರುವಾರ ‘ಮುಷ್ಠಿ ತುಂಬ ರಾಗಿ’ ಯೋಜನೆಯಲ್ಲಿ ಮಕ್ಕಳು ಸಂಗ್ರಹಿಸಿದ್ದ 600 ಕೆಜಿ ರಾಗಿಯನ್ನು ಚಿಂತಾಮಣಿಯ ವಾಸವಿ ವೃದ್ಧಾಶ್ರಮ ಮತ್ತು ಅನಾಥ ಮಕ್ಕಳ ಚಾರಿಟಬಲ್‌ ಟ್ರಸ್ಟ್‌ ಅವರಿಗೆ ದಾನವಾಗಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಸೇವಾ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ರೋಟರಿ ಇಂಟರಾಕ್ಟ್‌ ಕ್ಲಬ್‌ ಅನ್ನು ಶಾಲೆಯಲ್ಲಿ ಎರಡು ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ರೋಟರಿ ಬೆಂಗಳೂರು ಹೈಗ್ರೌಂಡ್ಸ್‌ ಅವರ ಕರೆಯ ಮೇರೆಗೆ ಪ್ರತಿ ದಿನ ಒಂದು ಮುಷ್ಠಿ ರಾಗಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ನೀಡುವ ಮೂಲಕ 600 ಕೆಜಿ ರಾಗಿಯನ್ನು ಸಂಗ್ರಹಿಸಿರುವುದು ಶ್ಲಾಘನೀಯ. ಇದನ್ನು ಅನಾಥ ಮಕ್ಕಳಿಗೆ, ದಿಕ್ಕಿಲ್ಲದ ವೃದ್ಧರಿಗೆ ನೀಡುವ ಮೂಲಕ ಮಕ್ಕಳು ಧನ್ಯತಾ ಭಾವವನ್ನು ಅನುಭವಿಸುವಂತಾಗಿದೆ. ಇದರಿಂದ ಮಕ್ಕಳಲ್ಲಿ ಸಾಮಾಜಿಕ ಕಳಕಳಿ, ಇತರರ ನೋವು ಅರಿಯುವ ಗುಣ, ಸೇವಾ ಮನೋಭಾವ ವೃದ್ಧಿಸುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರೋಟರಿ ಬೆಂಗಳೂರು ಹೈಗ್ರೌಂಡ್ಸ್‌ ಅಧ್ಯಕ್ಷ ವಿ.ರಾಮಚಂದ್ರ, ಕಾರ್ಯದರ್ಶಿ ಅರವಿಂದ ನಾಯ್ಡು ಮಕ್ಕಳನ್ನುದ್ದೇಶಿಸಿ ಮಾತನಾಡಿದರು.
ಬಿ.ಎಂ.ವಿ ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ.ವಿ.ಮುನೇಗೌಡ, ರೋಟರಿ ಸದಸ್ಯರಾದ ಸಂದೀಪ್‌, ರವಿಕುಮಾರ್‌, ಪ್ರೊ.ಎಚ್‌.ಬಿ.ಬಾಲಕೃಷ್ಣ, ನವೀನ್‌ಕುಮಾರ್‌, ಬಿ.ಎಂ.ವಿ ವಿದ್ಯಾ ಸಂಸ್ಥೆಯ ಟ್ರಸ್ಟಿಗಳಾದ ಎಂ.ವೆಂಕಟಮೂರ್ತಿ, ಸಂತೆ ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.