ಹಜರತ್ ಮೊಹಮ್ಮದ್ ಪೈಗಂಬರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ರಾಷ್ಟ್ರೀಯ ಹಿಂದು ಮಹಾಸಭಾ ಕಾರ್ಯಕಾರಿ ಅಧ್ಯಕ್ಷ ಕಮಲೇಶ್ ತಿವಾರಿ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿ ಶುಕ್ರವಾರ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನೇತೃತ್ವದಲ್ಲಿ ನೂರಾರು ಮುಸ್ಲಿಂ ನಾಗರಿಕರು ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದರು.
ಕಮಲೇಶ್ ತಿವಾರಿ ವಿರುದ್ಧ ಧಿಕಾರಗಳನ್ನು ಕೂಗುತ್ತಾ ಅಶೋಕ ರಸ್ತೆಯಲ್ಲಿರುವ ಜಾಮಿಯಾ ಮಸೀದಿಯಿಂದ ತಾಲ್ಲೂಕು ಕಚೇರಿಯವರೆಗೂ ಹಾಗೂ ಅಮೀರ್ಬಾಬಾ ದರ್ಗಾದಿಂದ ತಾಲ್ಲೂಕು ಕಚೇರಿಯವರೆಗೆ ಎರಡು ಪ್ರತಿಭಟನಾ ಮೆರವಣಿಗೆಗಳು ನಡೆದವು.
ಭಾರತ ಸಂವಿಧಾನವು ನಮಗೆ ನಮ್ಮ ಧರ್ಮದನುಸಾರ ಜೀವಿಸಲು ಅಧಿಕಾರ ನೀಡಿದೆ. ಇಡೀ ವಿಶ್ವದಲ್ಲೇ ಬಹು ಧರ್ಮ ಹಾಗೂ ಬಹುಭಾಷೆಗೆ ಹೆಸರಾದ ಭಾರಕ್ಕೆ ಕಪ್ಪು ಮಸಿ ಬಳಿಯುವ ಕೆಲಸ ಮಾಡಿರುವ ಕಮಲೇಶ್ ತಿವಾರಿ, ಮೊಹಮ್ಮದ್ ಪೈಗಂಬರ್ ಅವರ ಕುರಿತಂತೆ ಇಲ್ಲದ ಸಲ್ಲದ ಮಾತುಗಳನ್ನಾಡಿರುವುದು ಖಂಡನೀಯ. ಇತರ ಧರ್ಮೀಯರ ಮನಸ್ಸಿಗೆ ನೋವುಂಟು ಮಾಡುವ ಇಂಥಹವರನ್ನು ಯಾವುದೇ ಸಂಘ ಹಾಗೂ ಸಭೆಗಳಲ್ಲಿ ಸದಸ್ಯತ್ವವನ್ನು ಕೂಡ ನೀಡಬಾರದು. ಸರ್ವಧರ್ಮೀಯರು ಸೌಹಾರ್ಧದಿಂದ ಸಹಬಾಳ್ವೆಯಿಂದ ಬದುಕುತ್ತಿರುವ ದೇಶದಲ್ಲಿ ಧರ್ಮಗಳ ನಡುವೆ ದ್ವೇಷ ಬಿತ್ತುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.
ಅಹ್ಲೇ ಸುನ್ನತ್ ಉಲ್ ಜಮಾತ್ ಜಾಮಿಯಾ ಮಸೀದಿ ಕಾರ್ಯದರ್ಶಿ ಸಯ್ಯದ್ ಸಲಾಮ್ ಮುಂತಾದ ಮುಖಂಡರು ತಹಶಿಲ್ದಾರ್ ಮನೋರಮಾ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.