Home News ಮೇಲೂರಿನಲ್ಲಿ ನಡೆಯಲಿದೆ ಅಂಚೆ ಜಾತ್ರೆ

ಮೇಲೂರಿನಲ್ಲಿ ನಡೆಯಲಿದೆ ಅಂಚೆ ಜಾತ್ರೆ

0

ನಲವತ್ತು ವರ್ಷ ಪ್ರಾಯದ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ 2000ನೇ ಪ್ರದರ್ಶನ
ಅಂದು ಶಿಡ್ಲಘಟ್ಟದ ಸಮೀಪದ ಮೇಲೂರಿನಲ್ಲಿ ವಿಶಿಷ್ಟ ಜಾತ್ರೆಯೊಂದು ನಡೆದಿತ್ತು. ನಲವತ್ತು ವರ್ಷಗಳ ಹಿಂದಿನ ಮಾತಿದು. ‘ರೂರಾಪೆಕ್ಸ್‌’ ಹೆಸರಿನ ಫಲಕಗಳು ಅಲ್ಲಲ್ಲಿ ಕಾಣಿಸುತ್ತಿದ್ದವು. ಅಲ್ಲಿ ನಡೆದಿದ್ದು ಅಂಚೆ ಚೀಟಿಗಳ ಪ್ರದರ್ಶನ. ರೂರಾಪೆಕ್ಸ್‌ ಅಂದರೆ ರೂರಲ್‌ ಫಿಲಾಟಲಿಕ್‌ ಎಕ್ಸಿಬಿಷನ್ (ಗ್ರಾಮಾಂತರ ಅಂಚೆ ಚೀಟಿಗಳ ಪ್ರದರ್ಶನ). ಗ್ರಾಮದಲ್ಲಿ ನಡೆಯುವ ಅಪರೂಪದ ಪ್ರದರ್ಶನವನ್ನು ನೋಡಲು ಜನರು ಹೆಮ್ಮೆಪಟ್ಟು ಆಗಮಿಸಿದ್ದರು. ದೊಡ್ಡ ದೊಡ್ಡ ಫಲಕಗಳ ಮೇಲೆ ಪುಟ್ಟ ಪುಟ್ಟ ಅಂಚೆ ಚೀಟಿಗಳನ್ನು ಕಣ್ಣರಳಿಸಿ ನೋಡಿದ್ದರು. ಅಂಚೆ ಚೀಟಿಗಳಿಗೆ ಇಷ್ಟೆಲ್ಲ ಮಹತ್ವ ಇದೆಯೇ, ಇಷ್ಟೆಲ್ಲ ರೋಚಕ ಇತಿಹಾಸ ಇದೆಯೇ ಎಂದು ಅಚ್ಚರಿಪಟ್ಟಿದ್ದರು.
೧೯೭೮ರಲ್ಲಿ ಪ್ರಥಮ ಬಾರಿಗೆ ಮೇಲೂರಿನಲ್ಲಿ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಸ್ಥಾಪಿಸಿ ಪ್ರದರ್ಶನ ನಡೆಸಿ ರಾಜ್ಯದಲ್ಲೇ ದಾಖಲೆ ನಿರ್ಮಿಸಿದವರು ಮೇಲೂರು ಎಂ.ಆರ್.ಪ್ರಭಾಕರ್.
‘ಗ್ರಾಮೀಣ ಭಾಗದ ಮಕ್ಕಳಿಗಾಗಿ ಮತ್ತು ಜನರಿಗಾಗಿ ಅಂಚೆ ಚೀಟಿ ಮತ್ತು ನಾಣ್ಯ ನೋಟುಗಳ ಸಂಗ್ರಹದ ಮೂಲಕ ನಮ್ಮ ಹಿರಿಮೆಯನ್ನು ತಿಳಿಸಲೆಂದೇ ಮೇಲೂರಿನಲ್ಲಿ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಸ್ಥಾಪಿಸಿ ಪ್ರದರ್ಶನ ನಡೆಸಿದ್ದೆವು. ರಾಜ್ಯದಾದ್ಯಂತ ಗ್ರಾಮೀಣ ಭಾಗಗಳಲ್ಲಿ ಪ್ರದರ್ಶನಗಳನ್ನು ನಡೆಸುತ್ತಾ ಬಂದಿದ್ದು, ಇದೀಗ ನಮ್ಮ ಈ ಸಂಘದಿಂದ 40 ವರ್ಷಗಳ ನಂತರ ಪುನಃ ಮೇಲೂರಿನಲ್ಲಿಯೇ ೨00೦ ನೇ ಪ್ರದರ್ಶನವನ್ನು ಗಣರಾಜ್ಯೋತ್ಸವದ ದಿನದಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆಸಲಿದ್ದೇವೆ. ವಿಶ್ವಶಾಂತಿ, ಸ್ನೇಹ ಸೌಹಾರ್ಧತೆ, ಭಾವೈಕ್ಯದ ಸಂದೇಶವನ್ನು ಸಮಾಜಕ್ಕೆ ತಲುಪಿಸುವುದು, ಸಂಸ್ಕೃತಿ, ಪರಿಸರ ಪ್ರೇಮ ಹಾಗೂ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಅಂಚೆ ಚೀಟಿಗಳ ಮೂಲಕ ಪರಿಚಯಿಸುವುದು ನಮ್ಮ ಉದ್ದೇಶ’ ಎನ್ನುತ್ತಾರೆ ಮೇಲೂರು ಎಂ.ಆರ್.ಪ್ರಭಾಕರ್.
೧೯೭೮ರ ಜನವರಿ 26 ರಂದು ಮೇಲೂರು ಗ್ರಾಮದಲ್ಲಿ ಮೊಟ್ಟ ಮೊದಲ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘ ಸ್ಥಾಪನೆಯಾದ ಸವಿನೆನಪಿಗೆ ರೇಷ್ಮೆ ಕುರಿತಂತೆ ವಿಶೇಷ ಅಂಚೆ ಮುದ್ರೆಯನ್ನು, ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗಿತ್ತು. ಮೊಟ್ಟಮೊದಲ ರೂರಾಪೆಕ್ಸ್(ರೂರಲ್ ಫಿಲಾಟಲಿ ಎಕ್ಸಿಬಿಷನ್) ನಡೆದ ಜ್ಞಾಪಕಾರ್ಥವಾಗಿ ವಿಶೇಷ ಅಂಚೆ ಲಕೋಟೆ ಹಾಗೂ ಮುದ್ರೆ(ಕ್ಯಾನ್ಸಲೇಷನ್) ಯನ್ನು ಅಂಚೆ ಇಲಾಖೆ ಹೊರತಂದಿತ್ತು.

ಮೇಲೂರು ಎಂ.ಆರ್‌.ಪ್ರಭಾಕರ್‌
ಮೇಲೂರು ಎಂ.ಆರ್‌.ಪ್ರಭಾಕರ್‌

‘೧೯೭೮ರ ಗಣರಾಜ್ಯೋತ್ಸವದಂದು ಮೊಟ್ಟಮೊದಲ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘವನ್ನು ಮೇಲೂರಿನಲ್ಲಿ ಪ್ರಾರಂಭಿಸಿದೆವು. ಕೃಷಿಗೆ ಸಂಬಂಧಿಸಿದ ಅಂಚೆ ಚೀಟಿಗಳದ್ದೇ ಪ್ರದರ್ಶನ ಏರ್ಪಡಿಸಿದ್ದೆವು. ವಿವಿಧ ದೇಶಗಳ ವೈವಿದ್ಯಮಯ ಅಂಚೆಚೀಟಿಗಳ ಪ್ರದರ್ಶನವನ್ನು ಏರ್ಪಡಿಸಿದ್ದೆವು. ಹೆಚ್ಚೆಚ್ಚು ರೇಷ್ಮೆ ಬೆಳೆಯಿರಿ ಎಂಬುದು ನಮ್ಮ ಧ್ಯೇಯವಾಕ್ಯವಾಗಿತ್ತು. ಅಂಚೆ ಇಲಾಖೆಯವರು ಈ ಕಾರ್ಯವನ್ನು ಗೌರವಿಸಿ ವಿಶೇಷ ಅಂಚೆ ಲಕೋಟೆಯನ್ನು ಅಂದು ಹೊರತಂದರು. ಅದು ನಮ್ಮ ತಾಲ್ಲೂಕಿಗೇ ನೀಡಿದ ಗೌರವವಾಗಿತ್ತು. ಕೃಷಿಕನೇ ಭಾರತದ ಬೆನ್ನೆಲುಬು ಎಂಬ ಘೋಷ ವಾಕ್ಯ, ಕೃಷಿಕನ ಚಿತ್ರ ಹಾಗೂ ರೂರಾಪೆಕ್ಸ್ ಪ್ರಾರಂಭಿಸಿದ ದಿನ ಒಂದು ಬದಿಯಲ್ಲಿ ಮುದ್ರಿಸಿದ್ದರೆ, ಇನ್ನೊಂದು ಬದಿಯಲ್ಲಿ ಅಂಚೆ ಚೀಟಿಯ ಮೇಲೆ ಮೇಲೂರು ಅಂಚೆ ಕಚೇರಿಯ ಮುದ್ರೆ, ರೇಷ್ಮೆ ಹುಳು, ಹಿಪ್ಪುನೇರಳೆ ಎಲೆ, ಗೂಡಿನ ಚಿತ್ರ ಮತ್ತು ಹೆಚ್ಚು ರೇಷ್ಮೆ ಬೆಳೆಯಿರಿ ಎಂದಿರುವ ಮುದ್ರೆ ಒತ್ತಲಾಗಿತ್ತು. ಇದು ಅಂಚೆ ಇತಿಹಾಸದಲ್ಲಿ ದಾಖಲಾದ ಮೌಲಿಕ ವಸ್ತು’ ಎಂದು ರೂರಾಪೆಕ್ಸ್ ಸಂಸ್ಥಾಪಕ ಮೇಲೂರು ಎಂ.ಆರ್.ಪ್ರಭಾಕರ್ ನೆನಪಿಸಿಕೊಳ್ಳುತ್ತಾರೆ.
ಇದಾದ ನಂತರ ಶಾಲಾ, ಕಾಲೇಜುಗಳು, ವಿವಿಧ ಗ್ರಾಮಗಳು, ಊರುಗಳು ಮೊದಲಾದೆಡೆ ಅಂಚೆ ಚೀಟಿ ಪ್ರದರ್ಶಿಸುತ್ತಾ ಬಂದ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ವತಿಯಿಂದ ಹತ್ತು ವರ್ಷಗಳ ನಂತರ ೧೯೮೮ರಲ್ಲಿ ಮತ್ತೊಮ್ಮ ರೂರಾಪೆಕ್ಸ್(ರೂರಲ್ ಫಿಲಾಟಲಿ ಎಕ್ಸಿಬಿಷನ್) ಮೇಲೂರಿನಲ್ಲಿ ನಡೆಸಲಾಯಿತು. ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಡೆದ ಈ ಅಂಚೆ ಚೀಟಿ ಪ್ರದರ್ಶನದಲ್ಲಿ ‘ಗ್ರಾಮದ ಅಭಿವೃದ್ಧಿ’ ಎಂಬ ಧ್ಯೇಯ ವಾಕ್ಯವುಳ್ಳ ವಿಶೇಷ ಅಂಚೆ ಲಕೋಟೆ ಹಾಗೂ ಮುದ್ರೆ(ಕ್ಯಾನ್ಸಲೇಷನ್) ಯನ್ನು ಅಂಚೆ ಇಲಾಖೆ ಹೊರತಂದಿತ್ತು.
ಆ ನಂತರ ಅಂಚೆ ಚೀಟಿ ಪ್ರದರ್ಶಿಸುತ್ತಾ ಒಂದು ಸಾವಿರದ ಅಂಚೆ ಚೀಟಿ ಪ್ರದರ್ಶನವನ್ನು ೨೦೦೩ರ ಜನವರಿ ೨೬ ರಂದು ಮೇಲೂರಿನಲ್ಲಿ ನಡೆಸಲಾಯಿತು. ಆ ಸಂದರ್ಭದಲ್ಲಿ ‘ಸರ್ವರಿಗೂ ಶಾಂತಿ’ ಎಂಬ ಧ್ಯೇಯ ವಾಕ್ಯದೊಂದಿಗೆ ವಿಶೇಷ ಅಂಚೆ ಲಕೋಟೆ ಹಾಗೂ ಮುದ್ರೆ(ಕ್ಯಾನ್ಸಲೇಷನ್) ಯನ್ನು ಅಂಚೆ ಇಲಾಖೆ ಹೊರತಂದಿತು.
ಇದೀಗ 40 ವರ್ಷಗಳ ನಂತರ 2000ನೇ ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದ ಪ್ರದರ್ಶನದೊಂದಿಗೆ ವಿಶೇಷ ಅಂಚೆ ಲಕೋಟೆ ಹಾಗೂ ಮುದ್ರೆಯನ್ನು ಕರ್ನಾಟಕ ಸರ್ಕಲ್‌ ಪೋಸ್ಟ್‌ ಮಾಸ್ಟರ್‌ ಜನರಲ್‌ ವೀಣಾ ಶ್ರೀನಿವಾಸನ್‌ ಬಿಡುಗಡೆ ಮಾಡುವರು. ಗ್ರಾಮಾಂತರ ಅಂಚೆ ಚೀಟಿ ಸಂಗ್ರಹಕಾರರ ಸಂಘದಿಂದ ಪ್ರೇರಣೆ ಪಡೆದು ಅಂಚೆ ಚೀಟಿಗಳನ್ನು ಸಂಗ್ರಹಿಸುತ್ತಿರುವ ತಾಲ್ಲೂಕಿನ ಹಲವರ ಸಂಗ್ರಹಗಳನ್ನೂ ಈ ಎರಡು ದಿನಗಳ ಪ್ರದರ್ಶನದಲ್ಲಿ ಕಾಣಬಹುದಾಗಿದೆ.