Home News ಮೇಲೂರು ಕೆನರಾ ಬ್ಯಾಂಕ್‌ ಮುಂದೆ ಹಾಲು ಉತ್ಪಾದಕರ ಪ್ರತಿಭಟನೆ

ಮೇಲೂರು ಕೆನರಾ ಬ್ಯಾಂಕ್‌ ಮುಂದೆ ಹಾಲು ಉತ್ಪಾದಕರ ಪ್ರತಿಭಟನೆ

0

ಹಾಲು ಉತ್ಪಾದಕರಿಗೆ ಕನಿಷ್ಠ ಅಗತ್ಯವಿರುವಷ್ಟಾದರೂ ಹಣವನ್ನು ನೀಡಿ ಎಂದು ಒತ್ತಾಯಿಸಿ ಬ್ಯಾಂಕ್‌ ಸಿಬ್ಬಂದಿಗೆ ದಿಗ್ಭಂಧನೆ ಹಾಕಿ ಪ್ರತಿಭಟಿಸಿದ ಘಟನೆ ತಾಲ್ಲೂಕಿನ ಮೇಲೂರು ಗ್ರಾಮದ ಕೆನರಾ ಬ್ಯಾಂಕ್‌ನ ಬಳಿ ಬುಧವಾರ ನಡೆಯಿತು.
ಬೆಳಿಗ್ಗೆ 9 ಗಂಟೆಯ ಹೊತ್ತಿಗೆಲ್ಲಾ ಬ್ಯಾಂಕ್‌ ಮುಂದೆ ಜಮಾಯಿಸಿದ್ದ ಹಾಲು ಉತ್ಪಾದಕರು, ವ್ಯವಸ್ಥಾಪಕಿ ಮಂಜುಳಾ ಮತ್ತು ಸಿಬ್ಬಂದಿ ಬ್ಯಾಂಕ್‌ ಬೀಗಲು ತೆಗೆಯಲು ಬಿಡದೆ, ಜನರ ಸಮಸ್ಯೆಯನ್ನು ನಿಮ್ಮಿಂದ ಬಗೆಹರಿಸಲು ಆಗುತ್ತಿಲ್ಲ ತಮ್ಮ ಮೇಲಧಿಕಾರಿಗಳನ್ನು ಕರೆಸಿ ಎಂದು ಒತ್ತಾಯಿಸಿದರು.
ಮೇಲೂರು ಪಂಚಾಯಿತಿ ವ್ಯಾಪ್ತಿಯ ಮೇಲೂರು, ಚೌಡಸಂದ್ರ, ಕಂಬದಹಳ್ಳಿ, ಅಪ್ಪೇಗೌಡನಹಳ್ಳಿ, ಗಂಗನಹಳ್ಳಿ ಗ್ರಾಮಗಳ ಹಾಲು ಉತ್ಪಾದಕರು ಬ್ಯಾಂಕ್‌ ಮುಂದೆ ಸೇರಿದ್ದರು.
ಈ ಹಿಂದೆ ಹಾಲು ಉತ್ಪಾದಕರಿಗೆ ಕಾರ್ಯದರ್ಶಿಗಳ ಮೂಲಕ ಸಹಕಾರ ಸಂಘಗಳಲ್ಲಿ ವಿತರಿಸಲಾಗುತ್ತಿತ್ತು. ನವೆಂಬರ್‌ 8 ರ ಕೇಂದ್ರ ಸರ್ಕಾರದ ಆದೇಶದ ನಂತರ ಹಾಲು ಉತ್ಪಾದಕರ ಖಾತೆಗಳಿಗೆ ಅವರಿಗೆ ಸೇರಬೇಕಾದ ಹಣವನ್ನು ಜಮೆ ಮಾಡಲಾಯಿತು. ಆದರೆ ಬ್ಯಾಂಕ್‌ನವರು ಪ್ರತಿಯೊಬ್ಬರೂ ಕೇವಲ 2000 ರೂಗಳನ್ನು ಮಾತ್ರ ಪಡೆಯಬೇಕೆಂದು ನಿಯಮ ರೂಪಿಸಿರುವುದು ಹಾಲು ಉತ್ಪಾದಕರಿಗೆ ತೊಂದರೆಯಾಗಿದೆ. ನಾವು ನಮ್ಮ ನಿತ್ಯದ ಕೆಲಸವನ್ನು ಬಿಟ್ಟು ಪ್ರತಿ ದಿನ ಬ್ಯಾಂಕ್‌ ಮುಂದೆ ಸಾಲಿನಲ್ಲಿ ನಿಲ್ಲಲು ಸಾಧ್ಯವಿಲ್ಲ. ಹಾಲು ಬಿಲ್‌ 3 ಸಾವಿರದಿಂದ 10 ಸಾವಿರವರೆಗೂ ಇರುತ್ತದೆ. ಕುಟುಂಬ ನಿರ್ವಹಣೆ, ಹಸುವಿಗೆ ಮೇವು, ಬೂಸಾ, ಹಿಂಡಿ ಮುಂತಾದವುಗಳಿಗೆ ಹಣ ಬೇಕಿರುತ್ತದೆ. ನಮ್ಮ ಹಣವನ್ನು ಒಂದೇ ಬಾರಿ ನೀಡಿ ಎಂದು ಒತ್ತಾಯಿಸಿದರು.
ಬ್ಯಾಂಕ್‌ ವ್ಯವಸ್ಥಾಪಕರು ಅವರಿಗೆ ಬೇಕಿರುವವರನ್ನು ಕರೆಯಿಸಿ ಅವ್ಯವಹಾರಗಳು ನಡೆಸುತ್ತಿದ್ದರೆ. ಬ್ಯಾಂಕ್‌ ಸಿಬ್ಬಂದಿ ಸಹಾಯದಿಂದ ಶ್ರಿಮಂತರು ಕುಳಿತಲ್ಲಿಯೆ ಚಿಲ್ಲರೆ ತರಿಸಿಕೊಳ್ಳುತ್ತಿದ್ದಾರೆ, ಬಡವರು ಮಾತ್ರ ಸಾಲಿನಲ್ಲಿ ದಿನಗಟ್ಟಲೆ ನಿಲ್ಲುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದರು. ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಪೊಲೀಸರು ಇತ್ತ ಬರಲಿಲ್ಲ. ಪೊಲೀಸರಿಗೆ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.
ಮಳ್ಳೂರು ಎಸ್‌ಎಫ್‌ಸಿಎಸ್‌ ಅಧ್ಯಕ್ಷ ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಆರ್‌.ಎ.ಉಮೇಶ್‌ ಬ್ಯಾಂಕ್‌ ವ್ಯವಸ್ಥಾಪರೊಂದಿಗೆ ಚರ್ಚಿಸಿ ಹಾಲು ಉತ್ಪಾದಕರಿಗೆ 6 ಸಾವಿರ ರೂಗಳು, ಉಳಿದ ಗ್ರಾಹಕರಿಗೆ 4 ಸಾವಿರ ರೂಗಳನ್ನು ನೀಡುವಂತೆ ಮನವೊಲಿಸಿದರು. ಆ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.