Home News ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು

ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು

0

ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದು, ಮಕ್ಕಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಬೇಕು ಎಂದು ತುಮ್ಮನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ವಿಜಯಮ್ಮ ಕದಿರಪ್ಪ ಹೇಳಿದರು.
ತಾಲ್ಲೂಕಿನ ತುಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಆವರಣದಲ್ಲಿ ಸೋಮವಾರ ಆಯೋಜನೆ ಮಾಡಲಾಗಿದ್ದ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ಸರ್ಕಾರಿ ಶಾಲೆಗಳಿಗೆ ಬಡಕುಟುಂಬಗಳಿಂದ ಮಕ್ಕಳು ಬರುತ್ತಾರೆ, ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕಗಳು, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿವೇತನ ಹಾಗೂ ಸೈಕಲ್ಗಳನ್ನು ಉಚಿತವಾಗಿ ನೀಡುತ್ತಿದೆ. ಎಂಟನೇ ತರಗತಿಯ ಮಕ್ಕಳಿಗೆ ಮಾತ್ರ ಸೈಕಲ್ಗಳನ್ನು ವಿತರಣೆ ಮಾಡುತ್ತಿದ್ದು, ಮುಂದಿನ ಮೂರು ವರ್ಷಗಳವರೆಗೂ ಜೋಪಾನವಾಗಿ ನೋಡಿಕೊಳ್ಳಬೇಕು. ಪೋಷಕರು ಮಕ್ಕಳ ಸೈಕಲ್ಗಳನ್ನು ತಮ್ಮ ಸ್ವಂತಕ್ಕೆ ಉಪಯೋಗ ಮಾಡಿಕೊಳ್ಳಬಾರದು. ಮಾರಾಟ ಮಾಡಬಾರದು. ಶಿಕ್ಷಕರು ಪಠ್ಯ ಚಟುವಟಿಕೆಗಳು ಮಾತ್ರವಲ್ಲದೆ, ಪಠ್ಯೇತರ ಚಟುವಟಿಕೆಗಳು, ಕ್ರೀಡೆಗಳಲ್ಲಿ ಮಕ್ಕಳು ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ಪುಸ್ತಕಗಳು, ಹಾಗೂ ಕಲಿಕಾಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು.
ಗ್ರಾಮ ಪಂಚಾಯತಿ ಉಪಾಧ್ಯಕ್ಷ ಎಂ.ಸುರೇಂದ್ರ, ಗ್ರಾಮ ಪಂಚಾಯತಿ ಸದಸ್ಯರಾದ ಗುಣಮ್ಮ, ತಿಮ್ಮಕ್ಕ, ಎಸ್.ಡಿ.ಎಂ.ಸಿ.ಅಧ್ಯಕ್ಷ ಪಿ.ಎನ್.ಪ್ರಭಾಕರ, ಮುಖ್ಯಶಿಕ್ಷಕಿ ರುಕ್ಮಿಣಿಯಮ್ಮ, ಜೆ.ಎಸ್.ಶ್ರೀನಿವಾಸರಾವ್, ಚಿಕ್ಕಆಂಜಿನಪ್ಪ, ಜಯರಾಂ, ಮುನಿನಾರಾಯಣಪ್ಪ, ಅಶ್ವಥ್ಥಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.