Home News ಯುವಕರಲ್ಲಿ ನವೋತ್ಸಾಹವನ್ನು ತುಂಬಿದವರು ಸ್ವಾಮಿ ವಿವೇಕಾನಂದರು

ಯುವಕರಲ್ಲಿ ನವೋತ್ಸಾಹವನ್ನು ತುಂಬಿದವರು ಸ್ವಾಮಿ ವಿವೇಕಾನಂದರು

0

ಸ್ವಾಮಿ ವಿವೇಕಾನಂದರು ತಮ್ಮ ಶಕ್ತಿಯುತ ವ್ಯಕ್ತಿತ್ವದ ಮೂಲಕ, ಪ್ರಭಾವಪೂರ್ಣ ಮಾತುಗಳ ಮೂಲಕ ವಿದೇಶದಲ್ಲಿಯೂ ನಮ್ಮ ರಾಷ್ಟ್ರಚೇತನವನ್ನು ಜಾಗೃತಗೊಳಿಸಿದವರು. ಯುವಕರಲ್ಲಿ ನವೋತ್ಸಾಹವನ್ನು ತುಂಬಿ, ಅವರಲ್ಲಿ ನಮ್ಮ ಸಂಸ್ಕೃತಿಯ ಬಗ್ಗೆ ಹೆಮ್ಮೆಯನ್ನು ಮೂಡಿಸಿ, ನವಭಾರತದ ನಿರ್ಮಾಣಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟವರು ಎಂದು ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ತಿಳಿಸಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ‘ದ್ಯಾವರ ಕೋಗಿಲೆ ಕಲಾ ತಂಡ’ದ ವತಿಯಿಂದ ಗುರುವಾರ ಸಂಜೆ ಆಚರಿಸಿದ ಸ್ವಾಮಿ ವಿವೇಕಾನಂದರ 154ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಜನಸಾಮಾನ್ಯರ, ಬಡವರ ಬಗ್ಗೆ ಕಾಳಜಿ ಹೊಂದಿದ್ದರು. ಅದಕ್ಕಿಂತ ಮುಖ್ಯವಾಗಿ ಮಾನವೀಯತೆಯ ಪ್ರತಿಪಾದಕರಾಗಿದ್ದರು. ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ತತ್ವಗಳು ಇಂದಿನ ಯುವಕರಲ್ಲಿ ಆತ್ಮಸ್ಥೈರ್ಯವನ್ನು ತುಂಬುತ್ತದೆ. ಜಗದ ಮಾನವೀಯತೆಯ ಬೆಳಕು, ಸರ್ವಧರ್ಮಗಳ ನೆಲೆವೀಡು ನಮ್ಮ ಭಾರತ ದೇಶ ಎಂದು ಹೇಳುವ ಮೂಲಕ ಇಡೀ ಪ್ರಪಂಚವೇ ನಿಬ್ಬೆರಗಾಗುವಂತೆ ಮಾಡಿದ್ದರು. ವಿವೇಕಾನಂದರ ಜೀವನಮೌಲ್ಯಗಳು ಹಾಗೂ ಸಂದೇಶಗಳು ನಮ್ಮೆಲ್ಲರಿಗೆ ಅನುಕರಣೀಯ. ಅವುಗಳ ಪೈಕಿ ಕೆಲವನ್ನಾದರೂ ನಮ್ಮ ಯುವಜನತೆ ಮೈಗೂಡಿಕೊಂಡರೆ, ಅದುವೇ ಸ್ವಾಮಿ ವಿವೇಕಾನಂದರಿಗೆ ಗೌರವ ಸಲ್ಲಿಸಿದಂತೆ ಎಂದು ಹೇಳಿದರು.
ವಿಜಯಪುರದ ಛಾಯಾಗ್ರಾಹಕ ಲಕ್ಷ್ಮಣ್‌ ಮಾತನಾಡಿ, ಸ್ವಾಮಿ ವಿವೇಕಾನಂದರ ಜನನ, ಬಾಲ್ಯ, ರಾಮಕೃಷ್ಣರ ಜೊತೆಗೆ, ಮಠದ ಸ್ಥಾಪನೆ, ಭಾರತ ಪರ್ಯಟಣೆ, ವಿಶ್ವ ಪರ್ಯಟಣೆ, ಸರ್ವಧರ್ಮ ಸಮ್ಮೇಳನ, ಅವರ ಭಾಷಣಗಳು ಮೊದಲಾದ ವಿಚಾರಗಳನ್ನು ವಿವರಿಸಿದರು.
ಈ ಸಂದರ್ಭದಲ್ಲಿ ‘ದ್ಯಾವರ ಕೋಗಿಲೆ ಕಲಾ ತಂಡ’ದ ವತಿಯಿಂದ ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಮತ್ತು ಪ್ರಧಾನ ಕಾರ್ಯದರ್ಶಿ ಎ.ಎಂ.ತ್ಯಾಗರಾಜ್‌ ಅವರನ್ನು ಸನ್ಮಾನಿಸಲಾಯಿತು. ಜಾನಪದ ಗಾಯಕ ದೇವರಮಳ್ಳೂರು ಮಹೇಶ್‌ ದೇಶಭಕ್ತಿಗೀತೆಗಳನ್ನು ಹಾಡಿದರು.
ಶಿಕ್ಷಕ ಜಗದೀಶ್‌, ರೆಡ್ಡಿಸ್ವಾಮಿ, ವೆಂಕಟೇಶ್‌, ರಶ್ಮಿ, ಮಹೇಶ್‌ಕುಮಾರ್‌, ಪ್ರವೀಣ್‌, ನಿತೀಶ್‌, ಶಿವಪ್ರಸಾದ್‌ ಮತ್ತಿತರರು ಹಾಜರಿದ್ದರು.