ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬುವುದು, ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವುದು, ಯುವಕರಲ್ಲಿ ಶಕ್ತಿ ತುಂಬುವ ಕೆಲಸ ಅತ್ಯಂತ ಅವಶ್ಯಕವಾದುದು ಎಂದು ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ ಪುಟ್ಟು ತಿಳಿಸಿದರು.
ಎಸ್.ಎನ್.ಕ್ರಿಯಾ ಟ್ರಸ್ಟ್ ವತಿಯಿಂದ ಭಾನುವಾರ ಬಸ್ ನಿಲ್ದಾಣದ ಬಳಿಯ ಟ್ರಸ್ಟ್ ಕಚೇರಿಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ಪಾಸ್ ವಿತರಿಸಿ ಅವರು ಮಾತನಾಡಿದರು.
ದೇಶದ ಭವಿಷ್ಯ ಯುವಜನರ ಕೈಲಿದೆ. ಈಗ ಯುವ ಜನರ ಮನಸ್ಸು ಕೆಡಿಸಲು ಹಲವಾರು ಆಕರ್ಷಣೆಗಳಿವೆ. ಅವನ್ನೆಲ್ಲಾ ಮೀರಿ ಕ್ರೀಡೆ, ವಿದ್ಯಾಭ್ಯಾಸ, ಕೌಶಲ್ಯ ಹೊಂದಬೇಕು. ಆಗ ಮಾತ್ರ ಭವಿಷ್ಯ ರೂಪಿಸಿಕೊಳ್ಳಲು ಮತ್ತು ಸಾಧನೆ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಸ್.ಎನ್.ಕ್ರಿಯಾ ಟ್ರಸ್ಟ್ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. 300 ಮಂದಿ ಬಡ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಬೆಂಗಳೂರಿಗೆ ಹತ್ತಿರವಿದ್ದರೂ ಶಿಡ್ಲಘಟ್ಟ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿಲ್ಲ. ಊರು ಗುರುತಿಸಬೇಕಾದರೆ ಸಾಧಕರು ಹೊರಹೊಮ್ಮಬೇಕು. ಈಗಿನ ಯುವಕರು ದ್ವೇಷ ಭಾವನೆಯನ್ನು ಬಿಟ್ಟು ಪ್ರತಿಭಾವಂತರಾಗಿ, ಪ್ರಕಾಶಮಾನವಾಗಿ ಪ್ರಜ್ವಲಿಸಬೇಕು. ಫೇಸ್ ಬುಕ್, ವ್ಯಾಟ್ಸಪ್ ಗಳ ಆಕರ್ಷಣೆಯಿಂದ ದೂರವಿರಿ. ಅಂತರ್ಜಾಲವು ಜ್ಞಾನದ ಬೆಳವಣಿಗೆಗೆ ಪೂರಕವಾಗಿ ಬಳಕೆಯಾಗಲಿ ಎಂದು ಹೇಳಿದರು.
ಎಸ್.ಎನ್.ಕ್ರಿಯಾ ಟ್ರಸ್ಟ್ ಗೌರವಾಧ್ಯಕ್ಷ ಆನೂರು ದೇವರಾಜ್, ಅಶ್ವತ್ಥನಾರಾಯಣ, ಈ.ತಿಮ್ಮಸಂದ್ರ ನರಸಿಂಹಪ್ಪ, ಆನೂರು ಆಂಜಿನಪ್ಪ, ಬೈರೇಗೌಡ, ನಟರಾಜ್, ಮುನಿರಾಜು, ಮೌಲ ಹಾಜರಿದ್ದರು.