Home News ಯುವಕರು ಉದಾರ ಮನಸ್ಸಿನಿಂದ ರಕ್ತದಾನ ಮಾಡಿ

ಯುವಕರು ಉದಾರ ಮನಸ್ಸಿನಿಂದ ರಕ್ತದಾನ ಮಾಡಿ

0

ಮಾನವನ ರಕ್ತ ಅಮೂಲ್ಯವಾದುದು. ಇದು ಮನುಷ್ಯನ ಜೀವ ಉಳಿಸುತ್ತದೆ, ರಕ್ತದಾನಕ್ಕೆ ಪರ್ಯಾಯ ವಸ್ತುವೆಂದರೆ ರಕ್ತ ಒಂದೇ ಎಂದು ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ತಿಳಿಸಿದರು.
ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಯುವ ರೆಡ್‌ಕ್ರಾಸ್‌ ಘಟಕದ ವತಿಯಿಂದ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ವಿಜ್ಞಾನದ ಪ್ರಗತಿ ಸಾಕಷ್ಟು ನಡೆದರೂ ರಕ್ತವನ್ನು ಉತ್ಪಾದಿಸಲು ಸಾಧ್ಯವಾಗಿಲ್ಲ. ಹೆಣ್ಣುಮಕ್ಕಳ ಪ್ರಸವ ಸಂದರ್ಭದಲ್ಲಿ ರಕ್ತದ ಅಗತ್ಯವಿರುತ್ತದೆ. ಆದ ಕಾರಣ ಯುವಕರು ಉದಾರ ಮನಸ್ಸಿನಿಂದ ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯದ ಕೆಲಸದಲ್ಲಿ ಮುಂದೆ ಬರಬೇಕು ಎಂದು ಹೇಳಿದರು.

ಶಿಡ್ಲಘಟ್ಟದ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಯುವ ರೆಡ್‌ಕ್ರಾಸ್‌ ಘಟಕದ ವತಿಯಿಂದ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ರಕ್ತದಾನಿಗಳಿಗೆ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಪ್ರಮಾಣ ಪತ್ರವನ್ನು ನೀಡಿದರು. ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಎನ್‌.ಕೆ.ಗುರುರಾಜರಾವ್‌, ಪ್ರಾಂಶುಪಾಲ ಚಂದ್ರಾನಾಯಕ್‌ ಹಾಜರಿದ್ದರು.

ಭಾರತೀಯ ರೆಡ್‌ಕ್ರಾಸ್‌ ಸೊಸೈಟಿ ತಾಲ್ಲೂಕು ಕಾರ್ಯದರ್ಶಿ ಎನ್‌.ಕೆ.ಗುರುರಾಜರಾವ್‌ ಮಾತನಾಡಿ, ಶಿಡ್ಲಘಟ್ಟ ತಾಲ್ಲೂಕು ರಕ್ತದಾನದಲ್ಲಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ರಕ್ತದಾನದ ಶಿಬಿರಗಳಿಂದಾಗಿ ಜಿಲ್ಲೆಯಲ್ಲಿ ಮಹಿಳಾ ರೋಗಿಗಳಿಗೆ ಅದರಲ್ಲೂ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಅನುಕೂಲವಾಗಿದೆ. ಯುವಕರು ರಕ್ತದಾನ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಯ ಏಡ್ಸ್‌ ಚಿಕಿತ್ಸಾ ವಿಭಾಗದ ಗಂಗಾಧರಯ್ಯ ಮಾತನಾಡಿ, ತಾಲ್ಲೂಕಿನಲ್ಲಿ 400 ಏಡ್ಸ್‌ ರೋಗಿಗಳಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ 175 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏಡ್ಸ್‌ ರೋಗದ ಬಗ್ಗೆ ತಿಳುವಳಿಕೆ ಮತ್ತು ರೋಗಿಗಳಿಗೆ ಮಾರ್ಗದರ್ಶನ ಅಗತ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಏಡ್ಸ್‌ ತಡೆಗಟ್ಟುವುದು, ಜಾಗೃತಿ ಮತ್ತು ಸೋಂಕಿತರಿಗೆ ಆರೈಕೆ ಬೆಂಬಲ ನೀಡುವುದರ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಏಡ್ಸ್‌ ತಡೆಗಟ್ಟುವಲ್ಲಿ ಯುವಜನರ ಪಾತ್ರ ಎಂಬ ವಿಷಯವಾಗಿ ನಡೆದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದ ದೇವರಾಜ್‌, ಸೌಭಾಗ್ಯ ಮತ್ತು ರಷ್ಮಿ ಅವರಿಗೆ ಬಹುಮಾನಗಳನ್ನು ನೀಡಲಾಯಿತು.
ವೈದ್ಯಾಧಿಕಾರಿಗಳಾದ ಡಾ.ನಿರಂಜನ್‌, ಡಾ.ವಿಜಯಕುಮಾರ್‌, ಪ್ರಾಂಶುಪಾಲ ಚಂದ್ರಾನಾಯಕ್‌, ಪ್ರಾಧ್ಯಾಪಕರಾದ ರಾಮಚಂದ್ರಪ್ಪ, ಛಾಯಣ್ಣ, ಉಮೇಶ್‌ರೆಡ್ಡಿ, ಶ್ರೀಹರಿ ಹಾಜರಿದ್ದರು.