ಸದೃಢ ದೇಶ ಕಟ್ಟಲು ಯವಜನರ ಪಾತ್ರ ಹೆಚ್ಚಾಗಿದೆ. ಯುವಜನರು ಸಾಹಿತ್ಯ ಮತ್ತು ಸಾಂಸ್ಕೃತಿಯ ಬಗ್ಗೆ ಆಳವಾದ ಅರಿವು ಹೊಂದಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಶಾಸಕ ಎಂ.ರಾಜಣ್ಣ ತಿಳಿಸಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಾಹಿತ್ಯ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಂಸ್ಕೃತಿಯ ಕಡೆಗಣನೆಯಿದ ಸಮಾಜದ ಏಳಿಗೆ ಸಾಧ್ಯವಿಲ್ಲ. ಸ್ಮಾರ್ಟ್‌ಫೋನ್‌ಗಳು ಜನಪ್ರಿಯವಾದ ಮೇಲೆ ನಮ್ಮ ಯುವಜನರು ಮೊಬೈಲ್ ಲೋಕದಲ್ಲಿ ಕಳೆದುಹೋಗಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಜೀವನೋತ್ಸಾಹ ಹೆಚ್ಚಿಸುವಂತಹ ಹವ್ಯಾಸಗಳಲ್ಲೂ ಯುವಕರಿಗೆ ಆಸಕ್ತಿ ಕಡಿಮೆಯಾಗುತ್ತಿದೆ. ಓದು, ಉತ್ತಮ ಹವ್ಯಾಸ, ಕಲೆಯ ಬಗ್ಗೆ ಅಭಿರುಚಿ, ಕಲೆಯನ್ನು ಅನುಭವಿಸಿ ಆಸ್ವಾದಿಸುವ ಗುಣ, ಒಳ್ಳೆಯ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು. ಯುವಜನರಲ್ಲಿನ ಉತ್ಸಾಹ, ಶಕ್ತಿ, ತಾಕತ್ತು ವ್ಯರ್ಥವಾಗಬಾರದು ಎಂದು ಹೇಳಿದರು.
ವಿವಿಧ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಮತ್ತು ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಪ್ರಶಸ್ತಿಪತ್ರವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ವಚನ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದಿಂದ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ನೀಡಿದರು.
ವೈದ್ಯ ಹಾಗೂ ಪ್ರವಚನಕಾರ ಡಾ.ಡಿ.ಟಿ.ಸತ್ಯನಾರಾಯಣರಾವ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜನಾರ್ಧನ್, ಪ್ರಾಂಶುಪಾಲ ಎನ್.ಆನಂದ್, ಸರ್ಕಾರಿ ನೌಕರರ ಸಂಘದ ರಾಜ್ಯಪರಿಷತ್ ಸದಸ್ಯ ಸುಬ್ಬಾರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಮಳ್ಳೂರಯ್ಯ, ವಸಾಪ ತಾಲ್ಲೂಕು ಅಧ್ಯಕ್ಷ ಟಿ.ನಾರಾಯಣಸ್ವಾಮಿ ಮತ್ತಿತರರು ಹಾಜರಿದ್ದರು.