Home News ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಸಂಘಕ್ಕೆ ಶ್ಲಾಘನೆ

ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಸಂಘಕ್ಕೆ ಶ್ಲಾಘನೆ

0

ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಾ ಅವರ ಸಾಧನೆಗೆ ನೆರವಾಗಲು ಸ್ಥಾಪಿಸಿರುವ ಸಂಸ್ಥೆಯ ಉದ್ದೇಶ ಶ್ಲಾಘನೀಯ. ಈ ಬೆಳವಣಿಗೆಗಳು ಸಮಾಜದ ಅಭಿವೃದ್ಧಿಗೆ ಕಾರಣವಾಗುತ್ತವೆ ಎಂದು ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ ತಿಳಿಸಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಭಾನುವಾರ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ತಾಲ್ಲೂಕು ಹಾಗೂ ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಹಲವಾರು ಮಂದಿ ಸಾಧಕರು ನಮಗೆ ಪ್ರೇರಣೆ ಒದಗಿಸಿದ್ದಾರೆ. ಆದರೆ ಎಳೆಯರಲ್ಲಿ ಅಡಗಿರುವ ಪ್ರತಿಭೆಗೆ ನೀರೆರೆದು ಪ್ರೋತ್ಸಾಹಿಸಿ ಪ್ರತಿಭೆಯನ್ನು ಬೆಂಬಲಿಸುವ ಸಂಘದ ಕೊರತೆಯಿತ್ತು. ಅದು ಈಗ ಯುವ ಆಸಕ್ತರಿಂದ ಪೂರೈಸಿದೆ. ವಾಲೀಬಾಲ್ ಕ್ರೀಡಾಪಟು ಮುನಿರಾಜು ಹಲವು ವರ್ಷಗಳಿಂದ ಸ್ವಯಂ ಆಸಕ್ತಿಯಿಂದ ಎಳೆಯ ಕ್ರೀಡಪಟುಗಳಿಗೆ ತರಬೇತಿ ನೀಡುತ್ತಾ ಅವರನ್ನು ವಿವಿಧ ಕ್ರೀಡಾ ಶಾಲೆಗಳಿಗೆ ಸೇರಲು ಸಹಾಯ ಮಾಡಿದ್ದಾರೆ. ಈ ಸೇವೆ ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿರುವುದು ಉತ್ತಮ ಕೆಲಸವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ತು ಕೂಡ ಈ ಸಂಘದ ಕಾರ್ಯಗಳಿಗೆ ಬೆಂಬಲಿಸುತ್ತಾ ಮುಂದಿನ ದಿನಗಳಲ್ಲಿ ಇವರೊಂದಿಗೆ ಕೈಜೋಡಿಸಿ ಶಿಬಿರಗಳನ್ನು ಆಯೋಜಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ಪ್ರಮಾಣ ಪತ್ರಗಳನ್ನು ನೀಡಿ ಪ್ರೋತ್ಸಾಹಿಸುವುದಾಗಿ ಹೇಳಿದರು.
ಗ್ರಾಮಾಂತರ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪ್ರದೀಪ್ ಪೂಜಾರಿ ಮಾತನಾಡಿ, ಕ್ರೀಡಾ ಮನೋಭಾವ ಎಳೆಯರಲ್ಲಿ ಮೂಡಿಸಬೇಕು. ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ, ಒಳ್ಳೆಯದನ್ನು ಕಲಿಯುತ್ತಾ, ತಮ್ಮನ್ನು ತಾವು ವಿಮರ್ಶಿಸಿಕೊಳ್ಳುತ್ತಾ, ತಿದ್ದಿಕೊಳ್ಳುತ್ತಾ ಬೆಳೆಯುವ ಲಕ್ಷಣವದು. ಅದು ಮುಂದಿನ ಜೀವನಕ್ಕೆ ಸಹಾಯಕ ಎಂದು ಅಭಿಪ್ರಾಯಪಟ್ಟರು.
ಲಿಟಲ್ ಸ್ಟಾರ್ ಜ್ಯೂನಿಯರ್ ತಂಡದಿಂದ ದೇಶಭಕ್ತಿ ಬಿಂಬಿಸುವ ನೃತ್ಯಗಳನ್ನು ಪ್ರದರ್ಶಿಸಲಾಯಿತು. ವರ್ಷಿನಿ ಮತ್ತು ಭುವನ ಯೋಗಾಸನಗಳನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಬ್ಯಾಸ್ಕೆಟ್ ಬಾಲ್ ಕ್ರೀಡಾಪಟು ಮುನಿಕೃಷ್ಣ, ಕ.ಸಾ.ಪ ತಾಲ್ಲೂಕು ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಯೋಗಗುರು ಶ್ರೀಕಾಂತ್, ಕುಸ್ತಿಪಟು ಹುಮಾಯುನ್ಖಾನ್, ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ಪ್ರದೀಪ್ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಲಯನ್ ಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಲಕ್ಷ್ಮೀಪತಿ, ಗೌರವಾಧ್ಯಕ್ಷ ಮುನಿರಾಜು, ಟಿ.ಟಿ.ನರಸಿಂಹಪ್ಪ, ಆರ್.ಸುರೇಶ್, ರಾಜಶೇಖರ್, ನವಾಜ್, ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.