ದೇಶಸೇವೆಯನ್ನು ಗಡಿಯಲ್ಲಿ ಕಾದಾಡುವ ಯೋಧರ ರೀತಿಯಲ್ಲಿ ಸಾಮಾನ್ಯ ಜನರೂ ಮಾಡಬಹುದು. ರಕ್ತದಾನವೂ ಒಂದು ರೀತಿಯಲ್ಲಿ ದೇಶಸೇವೆಯೇ ಎಂದು ಕ್ಯಾಪ್ಟನ್ ಸುನಿಲ್ಕುಮಾರ್ ತಿಳಿಸಿದರು.
ಪಟ್ಟಣದ ಕ್ರೆಸೆಂಟ್ ವಿದ್ಯಾಸಂಸ್ಥೆಯ ಆವರಣದಲ್ಲಿ ಸೋಮವಾರ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಹಾಗೂ ಶಾಲಾ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಜಗತ್ತಿನ ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಟವಾದದ್ದು, ಸಕಾಲದಲ್ಲಿ ರೋಗಿಗಳಿಗೆ ಅಗತ್ಯವಿರುವ ರಕ್ತ ದೊರೆತರೆ ಪ್ರಾಣ ಉಳಿಸಲು ಸಹಕಾರಿಯಾಗಲಿದೆ. ಆರೋಗ್ಯ ವಂತರು ಸ್ವಯಂ ಪ್ರೇರಿತರಾಗಿ ರಕ್ತ ದಾನ ಮಾಡಲು ಮುಂದೆ ಬರಬೇಕು ಎಂದು ಹೇಳಿದರು.
ತಹಶೀಲ್ದಾರ್ ಜಿ.ಎ.ನಾರಾಯಣಸ್ವಾಮಿ ಮಾತನಾಡಿ, ರಾಜ್ಯದಲ್ಲೇ ನಮ್ಮ ಜಿಲ್ಲೆಯು ರಕ್ತ ಸಂಗ್ರಹಿಸುವುದರಲ್ಲಿ ಮೊದಲನೇ ಸ್ಥಾನದಲ್ಲಿದೆ. ನಮ್ಮ ಶಿಡ್ಲಘಟ್ಟ ತಾಲ್ಲೂಕು ಜಿಲ್ಲೆಯಲ್ಲೇ ರಕ್ತಸಂಗ್ರಹಿಸುವುದರಲ್ಲಿ ಪ್ರಥಮ ಸ್ಥಾನದಲ್ಲಿದೆ. ಸಾಮಾಜಿಕ ಕಳಕಳಿಯುಳ್ಳ ಮನಸ್ಸುಗಳು ಹಾಗೂ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ತಾಲ್ಲೂಕು ಪದಾಧಿಕಾರಿಗಳ ಪರಿಶ್ರಮ ಇದರಿಂದ ವ್ಯಕ್ತವಾಗುತ್ತದೆ ಎಂದು ತಿಳಿಸಿದರು.
ಒಟ್ಟು 63 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.
ಕ್ರೆಸೆಂಟ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ತಮೀಮ್ಪಾಷ, ರಜಸ್ವ ನಿರೀಕ್ಷಕ ಸುಬ್ರಮಣಿ, ಬೆಸ್ಕಾಂ ಎಂಜಿನಿಯರ್ ಅನ್ಸರ್ಪಾಷ, ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಆರ್.ಅನಂತಕೃಷ್ಣ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಗುರುರಾಜರಾವ್, ರೆಡ್ಕ್ರಾಸ್ ಸಂಸ್ಥೆಯ ಡಾ.ರವಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.