ಒಂದಾನೊಂದು ಕಾಲದಲ್ಲಿ ‘ಅಗ್ರಹಾರ’ಗಳು ಶೈಕ್ಷಣಿಕ ರಂಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಿಕ್ಷಣ ಕೇಂದ್ರಗಳಾಗಿದ್ದವು. ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿಯು ಐದು ಶತಮಾನಗಳ ಹಿಂದೆ ‘ಅಗ್ರಹಾರ ರಾಮಸಮುದ್ರ’ ವೆಂಬ ಖ್ಯಾತ ಕಲಿಕಾ ಕೇಂದ್ರವಾಗಿತ್ತೆಂದು ಅಲ್ಲಿನ ಶಾಸನದ ಮೂಲಕ ತಿಳಿದುಬರುತ್ತದೆ. ಕುಂದಲಗುರ್ಕಿಯ ಚಂದ್ರಕವಿಯ ‘ಶ್ರೀಕೃಷ್ಣ ಭೂಪಾಲಿಯಮು’ ಕೃತಿ ರಚನೆಯು 1830 ರಲ್ಲಾಯಿತೆಂದೂ ಆತ ಇನ್ನೂ ಕೆಲವು ಕೃತಿಗಳನ್ನು ಬರೆದಿರಬಹುದೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಗ್ರಾಮ ಪಂಚಾಯತಿ ಕೇಂದ್ರವಾದ ಕುಂದಲಗುರ್ಕಿ ಗ್ರಾಮದ ಹಿರಿಮೆಯನ್ನು ಸಾರುವ ಶಾಸನದ ಕಲ್ಲು ಹಾಗೂ ಹಲವಾರು ವೀರಗಲ್ಲುಗಳು ಅನಾಥವಾಗಿ ಗ್ರಾಮದಲ್ಲಿ ಕೆರೆಗೆ ಹೋಗುವ ದಾರಿಯ ಪಕ್ಕದಲ್ಲಿ ಬಿದ್ದಿವೆ. ಶಾಸನದ ಕಲ್ಲಂತೂ ಮಕಾಡೆ ಬಿದ್ದಿದ್ದು, ಹಳೆಯ ಲಿಪಿಯಿರುವ ಭಾಗ ನೆಲದ ಕಡೆಗೆ ತಿರುಗಿದೆ. ಅನಾಥಸ್ಥಿತಿಯಲ್ಲಿರುವ ಐದು ಶತಮಾನಗಳ ಹಿಂದಿನ ಈ ಅಪರೂಪದ ಶಾಸನ ಮತ್ತು ಹಲವಾರು ವೀರಗಲ್ಲುಗಳಿಗೆ ಕಾಯಕಲ್ಪಕ್ಕಾಗಿ ಕಾಯುತ್ತಿವೆ. ತಾಲ್ಲೂಕಿನ ಚೌಡಸಂದ್ರ, ಚೀಮಂಗಲ ಮತ್ತು ಸಾದಲಿ ಗ್ರಾಮಗಳಲ್ಲಿ ಹಳೆಯ ವೀರಗಲ್ಲುಗಳನ್ನೆಲಾ ಒಂದೆಡೆ ಸೇರಿಸಿ ಗುಡಿಯನ್ನಾಗಿಸಿ ಸಂರಕ್ಷಿಸಿದ್ದಾರೆ. ಈ ಮಾದರಿಯ ರಕ್ಷಣೆ ಇಲ್ಲಿ ಅವಶ್ಯವಿದೆ.
ಕರ್ನಾಟಕದ ಅಗ್ರಹಾರಗಳಲ್ಲಿ ಶಿವಮೊಗ್ಗದ ತಾಳಗುಂದದ ಅಗ್ರಹಾರ ಅತ್ಯಂತ ಪ್ರಾಚೀನವಾದ್ದು. ಇದನ್ನು ಮಯೂರಶರ್ಮನ ಪುರ್ವಿಕನಾದ ಮುಕ್ಕಣ್ಣ ಕದಂಬ ಸ್ಥಾಪಿಸಿದ. ಬಾದಾಮಿ ಚಾಲುಕ್ಯರು ಬಾದಾಮಿಯ ಅಗ್ರಹಾರಗಳನ್ನು ಸ್ಥಾಪಿಸಿದರು. ಅನೇಕ ಅಗ್ರಹಾರಗಳು ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿದ್ದುದು ಹಲವಾರು ಶಾಸನಗಳಿಂದ ತಿಳಿದು ಬಂದಿದೆ. ಅಗ್ರಹಾರಗಳಲ್ಲಿ ವೇದ, ವೇದಾಂಗ, ನ್ಯಾಯ, ಮೀಮಾಂಸೆ, ಸಾಂಖ್ಯ, ಯೋಗ, ವೇದಾಂತ, ಸ್ಮೃತಿ, ಇತಿಹಾಸ, ಪುರಾಣ, ಖಗೋಳಶಾಸ್ತ್ರ- ಮುಂತಾದವುಗಳ ಬೋಧನೆಗೆ ಅವಕಾಶ ಕಲ್ಪಿಸಲಾಗಿತ್ತು. ಆಯಾ ಅಧ್ಯಾಪಕರ ವಿಷಯಪಾಂಡಿತ್ಯಕ್ಕೂ ಕಾರ್ಯಮಹತ್ತ್ವಕ್ಕೂ ಅನುಗುಣವಾಗಿ ದಾನಗಳನ್ನು ನೀಡಲಾಗಿತ್ತು.
‘ನಮ್ಮ ಗ್ರಾಮ ಹಿಂದೆ ಒಂದು ಶಿಕ್ಷಣ ಕೇಂದ್ರವಾಗಿತ್ತೆಂದು ತಿಳಿದು ಬಹಳ ಹೆಮ್ಮೆ ಎನಿಸುತ್ತದೆ. ನಮ್ಮ ಗ್ರಾಮದ ಐತಿಹ್ಯವನ್ನು ತಿಳಿಸುವ ಅಪರೂಪದ ಶಾಸನ ಮತ್ತು ಪೂರ್ವಿಕರು ನಾಡಿನ ರಕ್ಷಣೆಗಾಗಿ ಮರಣಿಸಿದ್ದುದರ ಕುರುಹಾಗಿ ಉಳಿದಿರುವ ವೀರಗಲ್ಲುಗಳನ್ನು ಸಂರಕ್ಷಿಸಬೇಕಾದುದು ನಮ್ಮ ಆದ್ಯ ಕರ್ತವ್ಯ. ಗ್ರಾಮ ಪಂಚಾಯತಿಯಿಂದ ಈ ಮಹತ್ವದ ದಾಖಲೆಗಳಾದ ಕಲ್ಲುಗಳನ್ನು ಜೋಪಾನ ಮಾಡಬೇಕಿದೆ’ ಎಂದು ಗ್ರಾಮಸ್ಥ ನರಸಿಂಹಪ್ಪ ತಿಳಿಸಿದರು.