Home News ರಸ್ತೆಯಲ್ಲಿನ ದೊಂಗರ; ಪ್ರಯಾಣಿಕರಿಗೆ ಸದಾ ತೊಂದರೆ

ರಸ್ತೆಯಲ್ಲಿನ ದೊಂಗರ; ಪ್ರಯಾಣಿಕರಿಗೆ ಸದಾ ತೊಂದರೆ

0

ನಗರದ ಪೂಜಮ್ಮ ದೇವಾಲಯದ ಮುಂಭಾಗದ ಬೈಪಾಸ್ ರಸ್ತೆಯು ಅತ್ಯಂತ ಜನಸಂಚಾರದ ರಸ್ತೆಯಾಗಿದೆ. ಈ ರಸ್ತೆಯಲ್ಲಿ ಬಾವಿಯಂತೆ 15 ಅಡಿ ಆಳದ ದೊಂಗರವು ಮೂಡಿದ್ದು ನಾಗರಿಕರ ದೂರು ದುಮ್ಮಾನುಗಳು ಅನೇಕ ಬಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ತಲುಪಿಸಿದರೂ, ಸಮಸ್ಯೆ ಪರಿಹಾರ ಕಂಡಿಲ್ಲ. ಈ ಬಗ್ಗೆ ಈ ಭಾಗದ ಜನರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸುಮಾರು 15 ಅಡಿ ಆಳದಲ್ಲಿ ತ್ಯಾಜ್ಯ ನೀರು ಹರಿಯುವ ವ್ಯವಸ್ಥೆಯನ್ನು ನಗರದಲ್ಲಿ ಮಾಡಲಾಗಿದ್ದು, ಹಲವೆಡೆ ಈ ರೀತಿ ಮೇಲೆ ಮುಚ್ಚಿರುವ ಪ್ಲೇಟುಗಳು ಒಡೆದಿವೆ. ಅವನ್ನು ಹಲವೆಡೆ ಬದಲಿಸಿದರೂ ಈ ರಸ್ತೆಯಲ್ಲಿ ಮಾತ್ರ ಮೇಲಿನ ದೊಂಗರವು ಹಾಗೇ ಉಳಿದಿದೆ.
ಈ ರಸ್ತೆಯಲ್ಲಿ ಪ್ರತಿದಿನ ಶಾಲೆಗೆ ಹೋಗಲು ಸುಮಾರು ಎರಡು ಸಾವಿರ ಮಕ್ಕಳು ಓಡಾಡುತ್ತಾರೆ. ದಿಬ್ಬೂರಹಳ್ಳಿ, ಬಾಗೇಪಲ್ಲಿಗೆ ಹೋಗಲು ಇದೇ ಮುಖ್ಯ ಮಾರ್ಗವಾಗಿದ್ದು, ಸಿ.ಡಿ.ಪಿ.ಒ ಕಚೇರಿ ಕೂಡ ಇದರ ಮುಂಭಾದಲ್ಲಿಯೇ ಇದೆ. ಅತ್ಯಂತ ಜನ ಸಂಚಾರದ ಈ ರಸ್ತೆಯಲ್ಲಿ ಅದರಲ್ಲೂ ಕತ್ತಲಾದಾಗ ಮೃತ್ಯು ಕೂಪವಾಗಿ ಪರಿಣಮಿಸಿದೆ. ಸ್ಥಳೀಯರು ಈ ಹಳ್ಳದಲ್ಲಿ ಜನರು ಬೀಳದಂತೆ ಸುತ್ತ ಕಲ್ಲುಗಳನ್ನು ಜೋಡಿಸಿಟ್ಟಿದ್ದರೂ ಕತ್ತಲಲ್ಲಿ ಕಾಣದೆ ಅನೇಕರು ಬಿದ್ದು ಗಾಯಮಾಡಿಕೊಂಡ ನಿದರ್ಶನಗಳಿವೆ.
‘ಶಾಸಕರು ಹಾಗೂ ಜನಪ್ರತಿನಿಧಿಗಳಿಗೆ ಈ ರಸ್ತೆಯ ದುರವಸ್ಥೆಯನ್ನು ಸರಿಪಡಿಸಲು ಕೋರಿ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಪಿಡಬ್ಲೂಡಿ ಇಲಾಖೆಗೆ ತಿಳಿಸಿದರೆ ನಗರಸಭೆಗೆ ಸಂಬಂಧಪಟ್ಟಿರುವುದು ಎನ್ನುತ್ತಾರೆ. ನಗರಸಭೆಯವರು ಪಿಡಬ್ಲೂಡಿ ಇಲಾಖೆಗೆ ಸಂಬಂಧಿಸಿದ್ದು ಎಂದು ಜಾರಿಕೊಳ್ಳುತ್ತಿದ್ದಾರೆ. ಪ್ರತಿದಿನ ಇಲ್ಲಿ ಬೀಳುವವರ ಆರೈಕೆ ಮಾಡುವುದೇ ನಮ್ಮ ಕೆಲಸವಾಗಿದೆ. ಅರ್ಧ ರಸ್ತೆ ಹಳ್ಳಬಿದ್ದಿದೆ ಇದನ್ನು ಆದಷ್ಟು ಬೇಗ ಸರಿಪಡಿಸಬೇಕು’ ಎಂದು ಇಲ್ಲಿನ ಅಂಗಡಿಯೊಂದರ ಮಾಲಿಕ ಬೈರೇಗೌಡ ತಿಳಿಸಿದ್ದಾರೆ.