Home News ರಸ್ತೆ ಅಗಲೀಕರಣ ಹಾಗೂ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

ರಸ್ತೆ ಅಗಲೀಕರಣ ಹಾಗೂ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ

0

ಚಿಂತಾಮಣಿ ಬಾಗೇಪಲ್ಲಿ ರಸ್ತೆ ಅಗಲೀಕರಣ ಹಾಗೂ ಗಂಗಾಪುರ, ಕಾಚಹಳ್ಳಿ, ರಾಚನಹಳ್ಳಿ ಮಾರ್ಗವಾಗಿ ಸರ್ಕಾರಿ ಬಸ್ ಸೌಲಭ್ಯಕ್ಕಾಗಿ ಆಗ್ರಹಿಸಿ ತಾಲ್ಲೂಕಿನ ಗೋಣಿಮರದಹಳ್ಳಿ ಬಳಿ ಮಂಗಳವಾರ ಡಿ.ವೈ.ಎಫ್.ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಬೆಳಿಗ್ಗೆ ಏಳು ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ರಸ್ತೆ ತಡೆ ನಡೆಸಿ ಸ್ಥಳೀಯ ಶಾಸಕರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನಾ ನಿರತರನ್ನುದ್ದೇಶಿಸಿ ಮಾತನಾಡಿದ ಡಿ.ವೈ.ಎಫ್.ಐ ರಾಜ್ಯ ಮುಖಂಡ ಕುಂದಲಗುರ್ಕಿ ಮುನೀಂದ್ರ,‘ಬಂಗಾರಪೇಟೆ ಬಾಗೇಪಲ್ಲಿ ರಸ್ತೆ ಬಿ.ಬಿ ರಸ್ತೆಯೆಂದೇ ಖ್ಯಾತವಾಗಿದೆ. ಶಿಡ್ಲಘಟ್ಟ ತಾಲ್ಲೂಕು ಗಡಿಭಾಗದಿಂದ ಬಾಗೇಪಲ್ಲಿ ಗಡಿಭಾಗದವರೆಗಿನ ರಸ್ತೆ ಅಗಲೀಕರಣವಿಲ್ಲದ ಕಾರಣ ಹಲವಾರು ಅಪಘಾತಗಳು ಸಂಭವಿಸಿದ್ದು ನಾಗರೀಕರಿಗೆ ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆಯುಂಟಾಗುತ್ತಿದೆ. ಇತ್ತೀಚೆಗೆ ಸರ್ಕಾರಿ ಬಸ್ಸು ಇರಗಪ್ಪನಹಳ್ಳಿ ಬಳಿ ಉರುಳಿದ್ದರಿಂದ ಸಾಕಷ್ಟು ಜನರಿಗೆ ತೊಂದರೆಯಾಗಿತ್ತು. ಈ ಭಾಗದಲ್ಲಿ ಹಲವಾರು ಬಾರಿ ಅವಘಡಗಳು ಸಂಭವಿಸಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಸ್ತೆ ಸರಿಪಡಿಸಲು ಮುಂದಾಗದಿರುವುದು ಖಂಡನೀಯ’ ಎಂದು ಹೇಳಿದರು.
ಪ್ರತಿಭಟನೆಯನ್ನು ನಾಲ್ಕು ಗಂಟೆಗಳ ಕಾಲ ನಡೆಸಿದ್ದರಿಂದಾಗಿ ಸಾರಿಗೆ ಬಸ್ಸುಗಳಿಲ್ಲದೆ ಪ್ರಯಾಣಿಕರು ಪರದಾಡಿದರು. ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಲೋಕೇಶ್ ಭೇಟಿ ನೀಡಿ ಸಧ್ಯಕ್ಕೆ ಕೇತನಾಯಕನಹಳ್ಳಿಯಿಂದ ಗಂಜಿಗುಂಟೆವರೆಗೂ ರಸ್ತೆ ನಿರ್ಮಾಣದ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, 15 ದಿನಗಳಲ್ಲಿ ಡಾಂಬರೀಕರಣ ಮಾಡಲಾಗುವುದು. ಇನ್ನು 70 ಕಿಮೀ ರಸ್ತೆ ಕಾಮಗಾರಿ ಸರ್ಕಾರದ ಮಟ್ಟದಲ್ಲಿ ಆಗುತ್ತಿದ್ದು ಸಮಸ್ಯೆ ಬಗೆಹರಿಸಲಾಗುವುದೆಂದು ತಿಳಿಸಿದರು.
ಡಿ.ವೈ.ಎಫ್.ಐ ತಾಲ್ಲೂಕು ಅಧ್ಯಕ್ಷ ಸದಾನಂದ, ಫೈಯಾಜುಲ್ಲಾ, ಪ್ರವೀಣ್, ಮುರಳಿ, ಮುನಿ, ಬಾಬು, ವೆಂಕಟರಮಣ, ನರಸಿಂಹಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!