ಸುಸಜ್ಜಿತ ಸಂತೆ ಮೈದಾನ ಹಾಗೂ ಮಳಿಗೆಗಳಿದ್ದರೂ ತಾಲ್ಲೂಕಿನ ಹೊಸಪೇಟೆ ಗೇಟ್ ಬಳಿ ರಸ್ತೆಯ ಬದಿಯಲ್ಲೇ ಸಂತೆ ವ್ಯಾಪಾರ ನಡೆಸುತ್ತಿದ್ದು ಅಪಘಾತಕ್ಕೆ ಕಾರಣವಾಗಿದೆ.
ತಾಲ್ಲೂಕಿನ ಹೊಸಪೇಟೆ ಗ್ರಾಮ ಪಂಚಾಯಿತಿಗೆ ಸೇರಿರುವ ಜಂಗಮಕೋಟೆ ಕ್ರಾಸ್ ಅತಿ ಹೆಚ್ಚು ವ್ಯಾಪಾರ ನಡೆಯುವ ಕೇಂದ್ರವಾಗಿದೆ. ಪ್ರತಿ ಮಂಗಳವಾರ ನಡೆಯುವ ಇಲ್ಲಿನ ಸಂತೆಯಿಂದ ಪಂಚಾಯಿತಿಗೆ ವಾರ್ಷಿಕವಾಗಿ ಒಂದೂವರೆ ಲಕ್ಷ ರೂಗಳಷ್ಟು ಆದಾಯವಿದೆ. ಜಂಗಮಕೋಟೆ ಕ್ರಾಸ್‌ನಲ್ಲಿ ನಾಲ್ಕು ರಸ್ತೆಗಳ ಕೂಡುವ ಸ್ಥಳ ಹಾಗೂ ಜನಜಂಗುಳಿ ಹೆಚ್ಚೆಂದು ಸಾರ್ವಜನಿಕರಿಗೆ ತೊಂದರೆಯಾಗಬಾರದೆಂದು ರಸ್ತೆ ಬದಿಯಲ್ಲಿ ಸಂತೆ ನಡೆಯುತ್ತಿದ್ದುದನ್ನು ಬದಲಿಸಿ ಹೊಸಪೇಟೆ ಗೇಟ್ ಬಳಿ ಪಂಚಾಯಿತಿ ಸ್ಥಳದಲ್ಲಿ ಸುಮಾರು 19 ಲಕ್ಷ ರೂಗಳ ವೆಚ್ಚದಲ್ಲಿ ಸುಸಜ್ಜಿತ ಸಂತೆ ಮೈದಾನ, ಶೆಡ್ ಹಾಗೂ ಪ್ಲಾಟ್‌ಫಾರಂಗಳನ್ನು ನಿರ್ಮಿಸಲಾಗಿತ್ತು. ನೆರಳು, ಕುಡಿಯುವ ನೀರು, ಶೌಚಾಯಲ ವ್ಯವಸ್ಥೆ ಎಲ್ಲವನ್ನೂ ಕಲ್ಪಿಸಿದ್ದರೂ ಮಳಿಗೆಗಳ ಮುಂದೆ ರಸ್ತೆಬದಿಯಲ್ಲೇ ಜನರು ವ್ಯಾಪಾರಕ್ಕೆ ಅಂಗಡಿಗಳನ್ನು ತೆರೆದಿರುವುದರಿಂದ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಾರೆ.
ರಸ್ತೆ ಬದಿಯಲ್ಲಿ ಕೆಲವರು ಅಂಗಡಿ ಇಡುವುದರಿಂದಾಗಿ ಸಂತೆಯ ದಿನ ಟೆಂಪೊ, ಟ್ರಾಕ್ಟರ್ ಮುಂತಾದ ವಾಹನಗಳಲ್ಲಿ ತರಕಾರಿ ಮೊದಲಾದ ವಸ್ತುಗಳನ್ನು ಮಾರಾಟಕ್ಕೆ ತರುವವರು ಸಂತೆ ಮೈದಾನದೊಳಕ್ಕೆ ಹೋಗಲಾಗುವುದಿಲ್ಲ. ವಾಹನ ಸಂಚಾರ ಹೆಚ್ಚಾಗಿರುವ ಕೋಲಾರ ಚಿಕ್ಕಬಳ್ಳಾಪುರ ರಸ್ತೆಯಿದಾಗಿದ್ದು, ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವುದರಿಂದ ಒಂದೆಡೆ ವಾಹನ ಸಂಚಾರಕ್ಕೆ ಅಡಚಣೆಯುಂಟಾದರೆ, ತರಕಾರಿ ಮುಂತಾದವುಗಳನ್ನು ತಂದವರು ಸಂತೆ ಮಳಿಗೆಯವರೆಗೂ ರಸ್ತೆಯಿಂದ ಸಾಗಿಸಬೇಕಾದ ಅನಿವಾರ್ಯತೆ ಎದುರಿಸುವಂತಾಗುತ್ತದೆ.
‘ಸಂತೆ ನಡೆಯುವ ಸ್ಥಳ ಬದಲಿಸಿರುವುದಿಂದ ಜನರಿಗೆ ಗೊತ್ತಾಗಲೆಂದು ಮಿಠಾಯಿ ಮತ್ತು ಪ್ಲಾಸ್ಟಿಕ್ ಅಂಗಡಿಗಳನ್ನು ರಸ್ತೆ ಬದಿ ಇಡಲು ಅನುಮತಿ ಕೊಟ್ಟಿದ್ದೇವೆ. ಆದರೆ ಬೇರೆ ಎಲ್ಲಾ ವ್ಯಾಪಾರಸ್ಥರೂ ಸಂತೆಯ ಒಳಗೇ ವ್ಯಾಪಾರ ಮಾಡಬೇಕೆಂದು ತಿಳಿಸಿದ್ದೇವೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ತಿಳಿಸಿದರು.
ವಿಪರೀತವಾದ ವಾಹನ ಸಂಚಾರವಿರುವ ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ಬದಿಯಲ್ಲೇ ಎಲ್ಲಾ ರೀತಿಯ ಸಂತೆಯ ಅಂಗಡಿಗಳೂ ಮಂಗಳವಾರದಂದು ಸ್ಥಾಪಿತವಾಗುತ್ತವೆ. ಜನರು ರಸ್ತೆಯ ಬದಿಯಲ್ಲೇ ನಿಂತು ವ್ಯಾಪಾರ ಮಾಡುತ್ತಿರುತ್ತಾರೆ. ವೇಗವಾಗಿ ಹೋಗುವ ವಾಹನಗಳಿಂದ ಅನಾಹುತವಾಗುವುದರಿಂದ ಅಧಿಕಾರಿಗಳು ರಸ್ತೆ ಬದಿಯ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು. ಪಂಚಾಯಿತಿಯಿಂದ ನಿರ್ಮಿಸಲ್ಪಟ್ಟ ಮಳಿಗೆಯಲ್ಲೇ ವ್ಯಾಪಾರ ಮಾಡುವಂತೆ ನಿರ್ಬಂಧಿಸಬೇಕು. ಇದರಿಂದ ರಸ್ತೆಯ ಧೂಳು, ಅಪಘಾತ ಹಾಗೂ ವ್ಯಾಪಾರ ಮಾಡುವ ಜನರಿಗೆ ಸುರಕ್ಷೆಯೂ ಇರುವಂತಾಗುತ್ತದೆ ಎನ್ನುತ್ತಾರೆ ಸಾರ್ವಜನಿಕರು.