Home News ರಾಗಿ ರೈತನಿಗೆ ಚೇತೋಹಾರಿ….

ರಾಗಿ ರೈತನಿಗೆ ಚೇತೋಹಾರಿ….

0

ಮಳೆ ಕಣ್ಣಾಮುಚ್ಚಾಲೆಯಾಟವಾಡುತ್ತಿದೆ. ಎಲ್ಲಿ ಬೆಳೆ ಹಾಳಾಗುತ್ತೋ ಎಂಬ ಆತಂಕ ರೈತರದ್ದು. ಬಹುತೇಕ ಕಡೆ ಬೆಳೆ ಒಣಗಿಯೂ ಹೋಗಿದೆ. ಇಂಥ ಪರಿಸ್ಥಿತಿಯಲ್ಲಿ ನೀರಿನ ಸಮರ್ಥ ಬಳಕೆ ಮತ್ತು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸಿ ರಾಗಿಯನ್ನು ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ರೈತರೊಬ್ಬರು ಬೆಳೆಯುತ್ತಿದ್ದಾರೆ.
ರಾಗಿ ತಿಂದವ ನಿರೋಗಿ ಎಂಬ ಮಾತಿದೆ. ರಾಗಿ ಈ ನೆಲದ ಬಂಗಾರ. ತಿನ್ನುವವರಿಗೆ ಮಾತ್ರವಲ್ಲ ಬೆಳೆಯುವವರಿಗೂ ಎಂಬುದನ್ನು ಕನ್ನಮಂಗಲದ ರೈತ ಬೈರೇಗೌಡ ತೋರಿಸಿಕೊಟ್ಟಿದ್ದಾರೆ.
ಕನ್ನಮಂಗಲದ ರೈತ ಬೈರೇಗೌಡ ಒಂದೂ ಮುಕ್ಕಾಲು ಎಕರೆಯಲ್ಲಿ ಎಂ.ಎಲ್‌ 365 ಎಂಬ ರಾಗಿ ತಳಿಯನ್ನು ನಾಟಿ ಮಾಡಿದ್ದಾರೆ. ನರ್ಸರಿಯಿಂದ 25 ಸಾವಿರ ಸಸಿಗಳನ್ನು ತಂದು 2 ಅಡಿ ಮತ್ತು ಒಂದೂವರೆ ಅಡಿ ಅಂತರದಲ್ಲಿ ನಾಟಿ ಮಾಡಿ, ಹನಿ ನೀರಾವರಿ ಪದ್ಧತಿಯಲ್ಲಿ ನೀರು ಹಾಯಿಸುತ್ತಿದ್ದಾರೆ. ಒಂದೊಂದೂ ಹಲವಾರು ಕುಡಿಗಳನ್ನು ಹೊಡೆದಿದ್ದು, ಪ್ರತಿಯೊಂದು ಕವಲೂ ರಾಗಿ ತೆನೆಯನ್ನು ಹೊತ್ತು ತರಲು ಸಿದ್ಧವಾಗುತ್ತಿದೆ.

ಹಲವಾರು ಕವಲುಗಳನ್ನು ಹೊಂದಿರುವ ಒಂದು ರಾಗಿ ಸಸಿ
ಹಲವಾರು ಕವಲುಗಳನ್ನು ಹೊಂದಿರುವ ಒಂದು ರಾಗಿ ಸಸಿ

ಈ ಬಾರಿ ಮಳೆಯಿಲ್ಲದ ಕಾರಣ ತಾಲ್ಲೂಕಿನೆಲ್ಲೆಡೆ ಮಳೆಯಾಶ್ರಿತವಾಗಿ ಬೆಳೆಯಲು ಹೊರಟ ರಾಗಿ ಪೈರುಗಳು ಒಣಗಿವೆ. ಅಕಸ್ಮಾತ್‌ ಬಂದಿದ್ದರೂ ಇಳುವರಿ ಕಡಿಮೆಯಾಗಿದೆ. ಎಲ್ಲರೂ ಒತ್ತೊತ್ತಾಗಿ ರಾಗಿ ಚೆಲ್ಲುವ ಮೂಲಕ ಬೆಳೆ ಬೆಳೆದರೆ, ಬೈರೇಗೌಡರದ್ದು ಮಾತ್ರ ವಿಭಿನ್ನ ಹಾದಿ.
‘ಈ ಪದ್ಧತಿಯಲ್ಲಿ ಕಾಳುಗಳು ದಪ್ಪನಾಗಿರುತ್ತವೆ. ಜೊಳ್ಳು ಬರುವುದಿಲ್ಲ. ಉತ್ತಮ ಗಾಳಿ ಬೆಳಕಿರುವುದರಿಂದ ರೋಗ ಕಡಿಮೆ. ತೆನೆ ಕತ್ತರಿದರೂ ಹುಲ್ಲು ಮೇವಿಗೆ ಹಸಿರಾಗಿ ಸುಪುಷ್ಟಿಯಿಂದ ಕೂಡಿರುತ್ತದೆ. ಕಡ್ಡಿ ದಪ್ಪವಿರುವುದರಿಂದ ದನಕರುಗಳ ಮೇವಿಗೆ ಒದಗುತ್ತದೆ. ಸುಮಾರು ಒಂದು ಎಕರೆಗೆ ಈ ಪದ್ಧತಿಯಿಂದ 50 ರಿಂದ 60 ಮೂಟೆ ರಾಗಿ ಸಿಗುತ್ತದೆ. ಅದೇ ಸಾಂಪ್ರದಾಯಿಕ ಪದ್ಧತಿಯಲ್ಲಿ 10 ರಿಂದ 15 ಮೂಟೆಯಷ್ಟೇ ಸಿಗುವುದು. ಐದಯ ಎಕರೆ ಮಾಮೂಲಿ ರೀತಿಯಲ್ಲಿ ಬೆಳೆಯುವುದಕ್ಕಿಂತ ಈ ರೀತಿಯಾಗಿ ಒಂದು ಎಕರೆ ಬೆಳೆದರೆ ಸಾಕು’ ಎಂದು ಕನ್ನಮಂಗಲದ ಬೈರೇಗೌಡರು ವಿವರಿಸುತ್ತಾರೆ.
‘ಪೋಷಕಾಂಶಗಳ ಖಜಾನೆಯಾಗಿರುವ ರಾಗಿಯಲ್ಲಿ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶ ಹೇರಳವಾಗಿದೆ. ಅಷ್ಟೇ ಅಲ್ಲ ಪ್ರೊಟೀನ್ ಸಹ ಸಾಕಷ್ಟಿರುವುದರಿಂದ ರಾಗಿ ಒಂದು ಸಮೃದ್ಧ ಆಹಾರ. ಮಕ್ಕಳಿಗೆ ಬಣ್ಣಬಣ್ಣದ ಜಾಹೀರಾತಿನ ಬೇಬಿ ಫುಡ್ ತಿನ್ನಿಸುವ ಬದಲು ರಾಗಿ ಮುದ್ದೆ, ಅಂಬಲಿ, ಗಂಜಿ ಊಟ ರೂಢಿ ಮಾಡಿಸಿದರೆ ಅವರ ಬೆಳವಣಿಗೆ ಉತ್ತಮವಾಗುತ್ತದೆ ಎನ್ನುತ್ತಾರೆ ಹಿರಿಯರು. ಗ್ರಾಮೀಣ ಪ್ರದೇಶವನ್ನು ಬಿಟ್ಟು ಈಗ ಪಟ್ಟಣದಲ್ಲೂ ರಾಗಿ ಬಲು ಪ್ರಚಲಿತ. ಉಷ್ಣತೆ, ಮಧುಮೇಹ ನಿಯಂತ್ರಣಕ್ಕೆ ರಾಗಿ ಬಹು ಪ್ರಸಿದ್ಧಿ. ರಾಗಿಗೆ ಬೇಡಿಕೆ ಇದ್ದರೂ ಬೆಳೆಯುವ ರೈತರು ಮತ್ತು ಬೆಳೆಯುವ ಪ್ರದೇಶ ಕಡಿಮೆ ಆಗುತ್ತಿದೆ. ಹಾಗಾಗಿ ವಿಭಿನ್ನ ರೀತಿಯಲ್ಲಿ ಹೆಚ್ಚು ಇಳುವರಿ, ಉತ್ತಮ ಬೆಳೆ ಎಂಬ ಉದ್ದೇಶದಿಂದ ಈ ಸಾಲು ಪದ್ಧತಿಯನ್ನು, ಗುಣಿಪದ್ಧತಿಯನ್ನು ಅನುಸರಿಸಿದ್ದೇನೆ’ ಎಂದು ಅವರು ತಿಳಿಸಿದರು.