Home News ರಾಘವೇಂದ್ರಸ್ವಾಮಿಯವರ ೩೪೮ನೇ ಆರಾಧನಾ ಮಹೋತ್ಸವ

ರಾಘವೇಂದ್ರಸ್ವಾಮಿಯವರ ೩೪೮ನೇ ಆರಾಧನಾ ಮಹೋತ್ಸವ

0

ನಗರದ ಮುತ್ತೂರು ಬೀದಿಯ ರಾಘವೇಂದ್ರಸ್ವಾಮಿ ದೇವಾಲಯದಲ್ಲಿ ಶನಿವಾರ ರಾಘವೇಂದ್ರಸ್ವಾಮಿಯವರ ೩೪೮ನೇ ಆರಾಧನಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮೂರು ದಿನಗಳ ಕಾಲ ನಡೆಸುವ ಆರಾಧನಾ ಮಹೋತ್ಸವವು ಶುಕ್ರವಾರ ಪ್ರಾರಂಭವಾಯಿತು. ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆ, ಹಸ್ತೋದಕ, ಮಹಾಮಂಗಳಾರತಿ ನಡೆದು ಸಂಜೆ ವಿದುಷಿ ಪದ್ಮಜಾ ವಾಸುದೇವಾಚಾರ್ ಅವರಿಂದ ದೇವರ ನಾಮಗಳ ಗಾಯನ ನಡೆಯಿತು. ಪಿಟೀಲು ವಿದ್ವಾನ್ ಜಿ.ಎನ್.ಶ್ಯಾಮಸುಂದರ್ ಹಾಗೂ ಮೃದಂಗ ವಿದ್ವಾನ್ ಜಿ.ಎನ್.ವರದೇಂದ್ರಸಿಂಹ ಜೊತೆಯಲ್ಲಿದ್ದರು.
ಶನಿವಾರ ಸುಪ್ರಭಾತ ಸೇವೆ, ಪಂಚಾಮೃತ ಅಭಿಷೇಕ, ಸಹಸ್ರನಾಮಾರ್ಚನೆಯ ನಂತರ ರಾಯರ ಉತ್ಸವವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮಂಗಳವಾದ್ಯಗಳೊಂದಿಗೆ ನಡೆಸಲಾಯಿತು. ಹಸ್ತೋದಕ, ಮಹಾಮಂಗಳಾರತಿಯ ನಂತರ ಬ್ರಾಹ್ಮಣರ ಸಂತರ್ಪಣೆಯನ್ನು ನಡೆಸಲಾಯಿತು.
‘ಸುಮಾರು ೩೫ ವರ್ಷಗಳಿಂದಲೂ ನಗರದ ರಾಯರ ಮಠದಲ್ಲಿ ಮೂರು ದಿನಗಳ ಆರಾಧನೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪೂರ್ವಾರಾಧನೆ, ಮಧ್ಯಾರಾಧನೆ ಮತ್ತು ಉತ್ತರಾರಾಧನೆ ಎಂದು ಮೂರು ದಿನಗಳ ಕಾಲ ನಡೆಯುವ ಆರಾಧನೆಯಲ್ಲಿ ಹೋಮ ಹವನಗಳು, ರಾಯರ ಕಥೆಯನ್ನು ತಿಳಿಸುಕೊಡುವುದು, ವಿಶೇಷ ಪೂಜೆಗಳು, ಭಜನೆ, ಗೀತಗಾಯನಗಳನ್ನು ಆಯೋಜಿಸಲಾಗುತ್ತದೆ. ರಾಯರು ಭಕ್ತಿಯಿಂದ ಪೂಜಿಸುತ್ತಿದ್ದ ರಾಮ, ಕೃಷ್ಣ, ವೇದವ್ಯಾಸ, ಲಕ್ಷ್ಮೀನರಸಿಂಹ ಮತ್ತು ಹಯಗ್ರೀವ ದೇವರುಗಳನ್ನು ಪೂಜಿಸಲಾಗುತ್ತದೆ. ಸರ್ವರಿಗೂ ಸಲ್ಲುವ ರಾಯರ ಮಹಿಮೆಯನ್ನು ಎಲ್ಲರಿಗೂ ಸಾರುವ ಉದ್ದೇಶದಿಂದ ಸಂಜೆಗೆ ಶ್ರೀರಾಘವೇಂದ್ರ ವಿಜಯ ಹರಿಕಥೆಯನ್ನು ಆಯೋಜಿಸಿದ್ದೇವೆ. ಬುಧವಾರ ಸಂಜೆ ಎ.ಆರ್.ಸಂದೀಪ್ ಮತ್ತು ಆರ್.ಲಲಿತ ಅವರ ಸಂಗೀತ ಕಚೇರಿ ಆಯೋಜಿಸಿದ್ದೇವೆ’ ಎಂದು ರಾಘವೇಂದ್ರ ಸ್ವಾಮಿ ಟ್ರಸ್ಟ್ ನ ಅದ್ಯಕ್ಷ ಎಂ.ವಾಸುದೇವರಾವ್ ತಿಳಿಸಿದರು.
ಟ್ರಸ್ಟ್ ನ ಸದಸ್ಯರಾದ ಎಸ್.ವಿ.ನಾಗರಾಜರಾವ್ , ಶ್ರೀಕಾಂತ್ , ಬ್ರಾಹ್ಮಣ ಸಂಘದ ಅಧ್ಯಕ್ಷ ಎ.ಎಸ್.ರವಿ , ವಿಪ್ರ ಪ್ರತಿಭಾ ಪುರಸ್ಕಾರ ಮತ್ತು ಸೇವಾ ಟ್ರಸ್ಟ್ ನ ಅದ್ಯಕ್ಷ ಬಿ.ಆರ್.ಅನಂತಕೃಷ್ಣ, ಎಸ್.ಉದಯ್, ಬಿ.ಆರ್.ನಟರಾಜ್, ಸತ್ಯನಾರಾಯಣ ರಾವ್, ಶ್ರೀ ಶಂಕರ ಸೇವಾ ಟ್ರಸ್ಟ್ ಅದ್ಯಕ್ಷ ಶ್ರೀನಿವಾಸಮೂರ್ತಿ, ಶಂಕರ್, ನಾಗರಾಜ್, ಸತೀಶ್, ಮಂಜುನಾಥ, ವೆಂಕಟೇಶ , ನಾಗಭೂಷಣ ರಾವ್ ಹಾಜರಿದ್ದರು.

error: Content is protected !!