Home News ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಮನವಿ

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಮನವಿ

0

ಬರಗಾಲದಿಂದ ತತ್ತರಿಸುತ್ತಿರುವ ರೈತರ ಸಾಲ ಮನ್ನಾ ಮಾಡಬೇಕು ಹಾಗೂ ಎಕರೆಯೊಂದಕ್ಕೆ ೨೦ ಸಾವಿರ ರೂಗಳ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ( ಕೋಡಿಹಳ್ಳಿ ಚಂದ್ರಶೇಖರ್ ಬಣ) ಯ ತಾಲ್ಲೂಕು ಪದಾಧಿಕಾರಿಗಳು ಗುರುವಾರ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.
ರಾಜ್ಯಾಧ್ಯಂತ ಬರಗಾಲದಿಂದ ರೈತರು ತತ್ತರಿಸುತ್ತಿದ್ದು ಮಳೆಯಿಲ್ಲದ ಕಾರಣ ಭೂಮಿಗೆ ಹಾಕಿದ ಬೀಜ, ಗೊಬ್ಬರ ಮಣ್ಣು ಪಾಲಾಗಿದೆ. ಜಾನುವಾರುಗಳಿಗೆ ನೀರು ಮೇವಿಲ್ಲದೇ ಕಡಿಮೆ ಬೆಲೆಗೆ ಕಸಾಯಿ ಕಾನೆಗೆ ಸೇರುತ್ತಿದೆ. ಸಾಲದೆಂಬಂತೆ ಕೃಷಿಗಾಗಿ ಮಾಡಿರುವ ಸಾಲ ತಲೆ ಮೇಲಿದೆ. ಇಷ್ಟಾದರೂ ರೈತನ ನೆರವಿಗೆ ಬಾರದೇ ಶಾಸಕರ ಸಂಬಳ ಸೇರಿದಂತೆ ಇನ್ನಿತರ ಖರ್ಚುಗಳಿಗಾಗಿ ಜನರ ತೆರಿಗೆ ಹಣವನ್ನು ಬಳಸುತ್ತಿರುವ ಸರ್ಕಾರದ ಕ್ರಮ ಖಂಡನೀಯ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಕೂಡಲೇ ರೈತರ ಮೇಲಿರುವವ ಸಾಲ ಮನ್ನಾ ಮಾಡಿ ನೂತನ ಸಾಲ ನೀಡಬೇಕು, ಬರಗಾಲ ಪ್ರದೇಶದ ರೈತರಿಗೆ ಎಕರೆಗೆ ೨೦ ಸಾವಿರದಂತೆ ಪರಿಹಾರ ಧನ ನೀಡಬೇಕು. ರಾಜ್ಯದ ನೀರಾವವರಿ ಯೋಜನೆಗಳನ್ನು ಪೂರ್ಣಗೊಳಿಸಲು ಬಜೆಟ್‌ನ ಶೇ. ೨೫ ರಷ್ಟು ಹಣ ಮೀಸಲಿಡಬೇಕು. ಹಾಲು, ರೇಷ್ಮೆ, ತೆಂಗು, ತಾಳೆಗೆ ಬೆಂಬಲ ಬೆಲೆ ನಿಗಧಿಯಾಗಬೇಕು. ಕೆರೆ ಅಂಗಳದಲ್ಲಿರುವ ಜಾಲಿಮರ ಹಾಗು ನೀಲಗಿರಿ ಮರಗಳನ್ನು ತೆರವುಗೊಳಿಸಬೇಕು. ಬರಗಾಲವನ್ನು ತಡೆಗಟ್ಟುವವ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ತಹಸೀಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿದ ಗ್ರೇಡ್ ೨ ತಹಸೀಲ್ದಾರ್ ವಾಸುದೇವಮೂರ್ತಿ ಮನವಿಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ರವಾನಿಸುವುದಾಗಿ ಹೇಳಿದರು.
ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಉಪಾಧ್ಯಕ್ಷ ಮುನಿನಂಜಪ್ಪ, ನಗರ ಘಟಕದ ನಾರಾಯಣಸ್ವಾಮಿ, ವೇಣುಗೋಪಾಲ್‌, ರಾಮಕೃಷ್ಣಪ್ಪ, ದೇವರಾಜ್, ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಭಾರತಿ ಮತ್ತಿತರರು ಹಾಜರಿದ್ದರು.