Home News ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸದಸ್ಯರಿಂದ ಉಸ್ತುವಾರಿ ಸಚಿವರಿಗೆ ಮನವಿ

ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸದಸ್ಯರಿಂದ ಉಸ್ತುವಾರಿ ಸಚಿವರಿಗೆ ಮನವಿ

0

ಸತತ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯ ರೈತರ ನೆರವಿಗೆ ಧಾವಿಸಬೇಕು. ರೈತರ ವಿವಿಧ ಸಮಸ್ಯೆಗಳನ್ನು ಬಗೆ ಹರಿಸುವಂತೆ ಕೋರಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಸದಸ್ಯರು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿಯನ್ನು ಸಲ್ಲಿಸಿದರು.
ಸೋಮವಾರ ರೈತ ಸಂಘದ ಪದಾಧಿಕಾರಿಗಳು ಸಚಿವರ ಮನೆಯಲ್ಲಿ ಅವರನ್ನು ಭೇಟಿ ಮಾಡಿ ರೈತರ ಸಮಸ್ಯೆಗಳನ್ನು ವಿವರಿಸಿದರು. ಸತತ ಏಳು ವರ್ಷಗಳಿಂದ ಬರಗಾರ ಆವರಿಸಿರುವುದರಿಂದ, ರೈತರ ಸಾಲವನ್ನು ಮನ್ನಾ ಮಾಡಬೇಕು. ಒಂದು ಎಕರೆಗೆ 25 ಸಾವಿರ ರೂಗಳಷ್ಟು ಬೆಳೆ ನಷ್ಟ ಪರಿಹಾರ ನೀಡಬೇಕು. ಶಾಶ್ವತ ನೀರಾವರಿ ಹೋರಾಟಕ್ಕೆ ಮಣಿಸು ಸರ್ಕಾರ ರೂಪಿಸಿರುವ ನೀರಾವರಿ ನಿಗಮ, ಸಮನ್ವಯ ಸಮಿತಿ, ತಜ್ಞರ ಸಮಿತಿ ಮತ್ತು ಕೆ.ಸಿ.ವ್ಯಾಲಿ ಕುರಿತು ತುರ್ತು ಸಭೆ ಕರೆದು ಪ್ರಗತಿ ವಿವರ ತಿಳಿಸಿ.
ಬರಗಾಲದ ಪರಿಸ್ಥಿತಿಯ ನಡುವೆಯೂ ಸರ್ಕಾರ ಎಂಟು ತಿಂಗಳಿನಿಂದ ಹಾಲಿನ ಪ್ರೋತ್ಸಾಹಧನ ಬಿಡುಗಡೆ ಮಾಡದಿರುವುದು ದುರಂತ. ತಕ್ಷಣ ಪ್ರೋತ್ಸಾಹಧನ ಬಿಡುಗಡೆಗೆ ಕ್ರಮ ಕೈಗೊಳ್ಳಿ. ವಿದ್ಯುತ್‌ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಬೆಳೆ ಉಳಿಸಿಕೊಳ್ಳುವುದು ಕಷ್ಟಕರವಾಗಿದೆ. ಈ ಬಗ್ಗೆ ತುರ್ತು ಕ್ರಮ ಕೈಗೊಳ್ಳದಿದ್ದಲ್ಲಿ ಅಪಾರ ನಷ್ಟವುಂಟಾಗಲಿದೆ.
ಅಂತರ್ಜಲ ಕುಸಿತದಿಂದಾಗಿ ಜಿಲ್ಲೆಯನ್ನು ಕಪ್ಪುಪಟ್ಟಿಗೆ ಸೇರಿಸಿರುವ ಪರಿಸ್ಥಿತಿಯ ನಡುವೆಯೂ ಅಕ್ರಮ ಮರಳು ದಂದೆಗೆ ಪರೋಕ್ಷವಾಗಿ ಸಹಕರಿಸುತ್ತಿರುವ ಪೊಲೀಸ್‌ ಇಲಾಖೆಯ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮೂನೆ 53ರಲ್ಲಿ ಅರ್ಜಿ ಹಾಕಿರುವ ರೈತರಿಗೆ ಜಮೀನು ಮಂಜೂರು ಮಾಡುವಲ್ಲಿ ಪಾರದರ್ಶಕತೆಯಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಕೆ.ಸಿ.ವ್ಯಾಲಿ ಯೋಜನೆಯ ಟೆಂಡರ್‌ ಪ್ರಕ್ರಿಯೆ ಕಳೆದ ಶುಕ್ರವಾರ ಮುಗಿದಿದೆ. ನವೆಂಬರ್‌ 28ರಂದು ಗುದ್ದಲಿ ಪೂಜೆ ನಡೆಯಲಿದೆ. ಅತಿ ಶೀಘ್ರದಲ್ಲಿ ಸಭೆಯನ್ನು ಕರೆದು ರೈತಮುಖಂಡರಿಗೆ ಪ್ರಗತಿ ವಿವರವನ್ನು ನೀಡುವುದಾಗಿ ಭರವಸೆ ನೀಡಿದರು.
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಯಲುವಳ್ಳಿ ಸೊಣ್ಣೇಗೌಡ, ತಾದೂರು ಮಂಜುನಾಥ್‌ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.