Home News ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರಿಂದ ಪ್ರತಿಭಟನೆ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರಿಂದ ಪ್ರತಿಭಟನೆ

0

ತಾಲ್ಲೂಕು ಕಚೇರಿಯ ನೋಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳಿಂದ ಲೂಟಿ ನಡೆಯುತ್ತಿದ್ದು ರೈತರಿಗೆ ತೊಂದರೆಯಾಗುತ್ತಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸದಸ್ಯರು ಮಂಗಳವಾರ ಪ್ರತಿಭಟಿಸಿದರು.
ನಗರದಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸಿದ ರೈತರು ತಾಲ್ಲೂಕು ಕಚೇರಿಯ ಮುಂದೆ ಘೋಷಣೆಗಳನ್ನು ಕೂಗಿದರು.
ತಪ್ಪು ಮಾಡುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು. ಭೂಮಾಪನ ಇಲಾಖೆಯಲ್ಲಿ ರೈತರಿಗೆ ತ್ವರಿತವಾಗಿ ಕೆಲಸಗಳು ಆಗುತ್ತಿಲ್ಲ. ರೆಕಾರ್ಡ್ ರೂಮಿನಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ದಂಧೆ ಹೆಚ್ಚಾಗಿದ್ದು ಕಡತಗಳು ಮಾಯವಾಗುತ್ತಿವೆ. ಸಾಮಾನ್ಯ ರೈತರು ಬಂದರೆ ದಾಖಲೆಗಳು ಸಿಗುತ್ತಿಲ್ಲ. ಸುಖಾ ಸುಮ್ಮನೆ ಅಲೆದಾಡಿಸುತ್ತಾರೆ. ಆರ್.ಆರ್.ಟಿ ಕಚೇರಿಯಲ್ಲಿ ಅಧಿಕಾರಿಗಳು ಸಾಮಾನ್ಯ ಜನರನ್ನು ಅಲೆದಾಡಿಸುತ್ತಾರೆ. ತಾಲ್ಲೂಕಿನ ಕೆರೆಗಳನ್ನು ಸಂರಕ್ಷಣೆ ಮಾಡುವುದರಲ್ಲಿ ತಾಲ್ಲೂಕು ಆಡಳಿತ ವಿಫಲವಾಗಿದೆ. ಕೇವಲ ಬೆರಳೆಣಿಕೆ ಕೆರೆಗಳನ್ನು ಸರ್ವೆ ಮಾಡಿ ಕೆಲಸ ನಿಲ್ಲಿಸಿದ್ದಾರೆ. ಜಾಲಿಮರಗಳನ್ನು ತೆಗೆಯುವುದಕ್ಕೆ ಅರಣ್ಯ ಇಲಾಖೆ ಕಡೆ ಬೆರಳು ತೋರಿಸಿ ಕಾಲ ಕಳೆಯುತ್ತಿದ್ದಾರೆ. ಕೆರೆ ಒತ್ತುವರಿ ಮತ್ತು ರಾಜ ಕಾಲುವೆ ಒತ್ತುವರಿ ತೆರವುಗೊಳಿಸಿಲ್ಲ ಎಂದು ಆರೋಪಿಸಿದರು.
ತಾಲ್ಲೂಕನ್ನು ಬರಗಾಲ ಪೀಡಿತವೆಂದು ಘೋಷಿಸಿರುವುದರಿಂದ ನೀರಿನ ಸಮಸ್ಯೆ ನೀಗಿಸಬೇಕು ಮತ್ತು ಪಂಚಾಯಿತಿಗೆ ಒಂದು ಗೋಶಾಲೆ ನಿರ್ಮಿಸಬೇಕು. ಬರ ಪರಿಹಾರದ ಹಣ ಒಂದು ಹೆಕ್ಟೇರಿಗೆ ೨೫ ಸಾವಿರದಂತೆ ಕೊಡಬೇಕು ಎಂದು ಆಗ್ರಹಿಸಿದರು.
ರೈತಸಂಘದ ಸದಸ್ಯರು ತಹಶೀಲ್ದಾರ್ ಅಜಿತ್ ಕುಮಾರ್ ರೈ ಅವರಿಗೆ ಮನವಿಯನ್ನು ಸಲ್ಲಿಸಿದರು. ಮನವಿ ಸ್ವೀಕರಿಸಿ ಅವರು ರೈತರ ಬೇಡಿಕೆಗಳನ್ನು ಅತಿ ಶೀಘ್ರವಾಗಿ ಈಡೇರಿಸುವುದಾಗಿ ಭರವಸೆ ನೀಡಿದರು.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣರೆಡ್ಡಿ, ಉಪಾಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಪ್ರಧಾನ ಕಾರ್ಯದರ್ಶಿ ಜೆ.ಎಸ್.ವೆಂಕಟಸ್ವಾಮಿ, ರಾಜ್ಯ ವಿಭಾಗಮಟ್ಟದ ಕಾರ್ಯದರ್ಶಿ ಪಾರ್ವತಮ್ಮ, ತಾಲ್ಲೂಕು ಅಧ್ಯಕ್ಷ ಎಸ್.ಎಂ.ರವಿಪ್ರಕಾಶ್, ಪ್ರತೀಶ್, ರಘುನಾಥರೆಡ್ಡಿ, ಬಾಜಿಸಾಬ್, ವರದರಾಜ್, ಶಿವಶಂಕರರೆಡ್ಡಿ, ಕದಿರೇಗೌಡ, ಆಂಜಿನಪ್ಪ, ಆನೂರು ದೇವರಾಜ್, ಬೈರಣ್ಣ, ಅರುಣ್ ಕುಮಾರ್, ಶಂಕರನಾರಾಯಣ, ಗೋವಿಂದಪ್ಪ, ವೆಂಕಟರೆಡ್ಡಿ, ಪ್ರವೀಣ್, ಗಡಿಮಿಂಚೇನಹಳ್ಳಿ ಬಾಬು, ಚನ್ನೇಗೌಡ, ಜಗನ್ನಾಥ, ಶ್ರೀಧರ್, ಶ್ರೀನಿವಾಸ್, ರಮೇಶ್, ಶ್ರೀಕೃಷ್ಣಪ್ಪ ಹಾಜರಿದ್ದರು.

error: Content is protected !!