Home News ರಾಜ್ಯ ಸರ್ಕಾರ ನೀರಿನ ವಿಚಾರದಲ್ಲಿ ನಾಟಕವಾಡುತ್ತಿದೆ

ರಾಜ್ಯ ಸರ್ಕಾರ ನೀರಿನ ವಿಚಾರದಲ್ಲಿ ನಾಟಕವಾಡುತ್ತಿದೆ

0

ಬಯಲುಸೀಮೆ ಭಾಗಕ್ಕೆ ಕೃಷಿ ಹಾಗೂ ಕುಡಿಯುವ ನೀರು ಪೂರೈಸಲು ಎತ್ತಿನಹೊಳೆ ಯೋಜನೆ ಜಾರಿಗೊಳಿಸುವುದಾಗಿ ಹೇಳುತ್ತಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಭಾಗದ ಜನತೆಯನ್ನು ಎತ್ತಿನಹೊಳೆ ಯೋಜನೆ ವಿರೋಧಿಸುವಂತೆ ಎತ್ತಿಕಟ್ಟಿ ನಾಟಕವಾಡುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದರು.
ನಗರದ ಉಲ್ಲೂರುಪೇಟೆಯ ವಿಜಯನಗರ ಹೆಬ್ಬಾಗಿಲು ಬಳಿ ಭಾನುವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ನಗರ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಬಯಲುಸೀಮೆ ಭಾಗದ ಕಾಂಗ್ರೆಸ್ ಪಕ್ಷದವರು ಎತ್ತಿನಹೊಳೆಗೆ ಬೆಂಬಲ ನೀಡುವ ನಾಟಕವಾಡಿದರೆ ದಕ್ಷಿಣ ಕನ್ನಡ ಭಾಗದ ಕಾಂಗ್ರೆಸ್ನವರು ಎತ್ತಿನಹೊಳೆ ಯೋಜನೆಗೆ ವಿರೋಧ ಮಾಡುತ್ತಾರೆ. ಎತ್ತಿನಹೊಳೆ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ನೀರನ್ನು ಎತ್ತುವ ಬಾವಿಯ ಕೆಲಸ ಮಾತ್ರ ನಡೆಯುತ್ತಿದೆ, ತಡೆಗೋಡೆಯ ಕೆಲಸ ಒಂದು ಮುಕ್ತಾಯದ ಹಂತಕ್ಕೆ ಬಂದಿದೆ, ಮತ್ತೊಂದು ಕೆಲಸ ಪ್ರಾರಂಭವಾಗಿದೆ. ಇದೇ ರೀತಿ ಕಾಮಗಾರಿ ನಡೆದಿದ್ದೇ ಆದಲ್ಲಿ ಮುಂದಿನ ೨೫ ವರ್ಷಗಳಾದರೂ ಈ ಭಾಗಕ್ಕೆ ನೀರು ಕೊಡಲು ಸರ್ಕಾರದಿಂದ ಸಾಧ್ಯವಾಗುವುದಿಲ್ಲ ಎಂದರು.
ಬಯಲುಸೀಮೆ ಭಾಗಕ್ಕೆ ನೀರು ನೀಡುವ ವಿಚಾರದಲ್ಲಿ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಇದೇ ಮೇ ೨೭ ರವರೆಗೂ ನೋಡಿ ನಂತರ ಬೆಂಗಳೂರಿನಲ್ಲಿ ನಡೆಯುವಂತಹ ಸಮಾವೇಶದಲ್ಲಿ ಮುಂದಿನ ಹೋರಾಟಗಳ ಬಗ್ಗೆ ನಿರ್ಧರಿಸಲಾಗುತ್ತದೆ ಎಂದರು.

ಶಿಡ್ಲಘಟ್ಟದ ಉಲ್ಲೂರುಪೇಟೆಯ ವಿಜಯನಗರ ಹೆಬ್ಬಾಗಿಲು ಬಳಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಗರ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ರೈತರನ್ನು ಹಾಗೂ ನೀರಾವರಿ ಹೋರಾಟಕ್ಕೆ ಬೆಂಬಲಿಸಿದ ನಗರ ವ್ಯಾಪ್ತಿಯ ಟ್ರ್ಯಾಕ್ಟರ್ ಮಾಲೀಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಡ್ಲಘಟ್ಟದ ಉಲ್ಲೂರುಪೇಟೆಯ ವಿಜಯನಗರ ಹೆಬ್ಬಾಗಿಲು ಬಳಿ ರಾಜ್ಯ ರೈತ ಸಂಘ ಹಾಗು ಹಸಿರುಸೇನೆ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಗರ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ರೈತರನ್ನು ಹಾಗೂ ನೀರಾವರಿ ಹೋರಾಟಕ್ಕೆ ಬೆಂಬಲಿಸಿದ ನಗರ ವ್ಯಾಪ್ತಿಯ ಟ್ರ್ಯಾಕ್ಟರ್ ಮಾಲೀಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳಿಗೆ ೬.೧೧ ಲಕ್ಷ ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದು ರಾಜ್ಯದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಾಲ ಮನ್ನಾ ಮಾಡುವ ಯಾವುದೇ ಚಿಂತನೆ ನಡೆಸಿಲ್ಲ. ದೇಶದ ರೈತರು ಬರಗಾಲಕ್ಕೆ ತುತ್ತಾಗಿ ಸಂಕಷ್ಟದಲ್ಲಿ ಸಿಲುಕಿದ್ದರೂ ಕೂಡಾ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಬದಲಿಗೆ ರೈತರು ಹೋರಾಟ ಮಾಡಿದರೆ ಅವರನ್ನು ಲಾಠಿಗಳಲ್ಲಿ ಹೊಡೆಸುವ ರಾಜ್ಯ ಸರ್ಕಾರ ರೈತರನ್ನು ಕೇವಲ ಚುನಾವಣೆ ಅಸ್ತ್ರದಂತೆ ಬಳಸುತ್ತಿರುವುದು ಖಂಡನೀಯ ಎಂದರು.
ರಾಜ್ಯದ ರೈತ ಮುಖಂಡರು ಹಾಗು ಈ ಭಾಗದ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಕೊಟ್ಟಂತಹ ಮಾತಿನ ಪ್ರಕಾರ ನಡೆದುಕೊಳ್ಳಲಿಲ್ಲ. ಈ ಭಾಗದ ಸಂಸದರು, ಶಾಸಕರು ಸಹ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸಕ್ಕೆ ಮುಂದಾಗಿಲ್ಲ ಹಾಗಾಗಿ ಮುಂದಿನ ದಿನಗಳಲ್ಲಿ ಜನಪ್ರತಿನಿಧಿಗಳನ್ನು ಕಟ್ಟಿಹಾಕಿ ಹೋರಾಟ ಮಾಡಬೇಕಾದಂತಹ ಅನಿವಾರ್ಯತೆ ಎದುರಾಗಲಿದೆ ಎಂದರು.
ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ ಬಯಲುಸೀಮೆ ಭಾಗದಲ್ಲಿ ತೀವ್ರ ಬರಗಾಲ ತಾಂಡವವಾಡುತ್ತಿದ್ದರೂ ಪ್ರತಿನಿತ್ಯ ಸುಮಾರು ೯ ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿರುವ ಈ ಭಾಗದ ರೈತರಿಗೆ ಹಾಲಿನ ಮೇಲೆ ಬೆಂಬಲ ಬೆಲೆ ನೀಡಲು ರಾಜ್ಯಾಧ್ಯಕ್ಷರು ಗಮನಹರಿಸುವುದರೊಂದಿಗೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆಯನ್ನು ನಿಗದಿಪಡಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ಬಸ್ ನಿಲ್ದಾಣದಿಂದ ರಾಜ್ಯಾಧ್ಯಕ್ಷರನ್ನು ಬೈಕ್ ರ್ಯಾಲಿ ಮೂಲಕ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಕರೆ ತರಲಾಯಿತು.
ಸಮಾರಂಭದಲ್ಲಿ ಹಿರಿಯ ರೈತ ಯೋಗಿಗಳಿಗೆ ಹಾಗು ನೀರಾವರಿ ಹೋರಾಟಕ್ಕೆ ಬೆಂಬಲಿಸಿದ ನಗರ ವ್ಯಾಪ್ತಿಯ ಟ್ರ್ಯಾಕ್ಟರ್ ಮಾಲೀಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್.ಆಂಜನೇಯರೆಡ್ಡಿ, ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್, ನಗರ ಘಟಕದ ಅಧ್ಯಕ್ಷ ಬಿ.ನಾರಾಯಣಸ್ವಾಮಿ, ಉಪಾಧ್ಯಕ್ಷ ರಾಮಕೃಷ್ಣಪ್ಪ, ಕಾರ್ಯದರ್ಶಿ ಕೆ.ವಿ.ವೇಣುಗೋಪಾಲ್, ಹಿತ್ತಲಹಳ್ಳಿ ಗೋಪಾಲಗೌಡ ಮತ್ತಿತರರು ಹಾಜರಿದ್ದರು.

error: Content is protected !!