Home News ರಾಜ್ಯ ಹೆದ್ದಾರಿ 234 ರ ರಸ್ತೆ ಕಾಮಗಾರಿಯ ವೀಕ್ಷಣೆ

ರಾಜ್ಯ ಹೆದ್ದಾರಿ 234 ರ ರಸ್ತೆ ಕಾಮಗಾರಿಯ ವೀಕ್ಷಣೆ

0

ಶಿಡ್ಲಘಟ್ಟ-ಚಿಂತಾಮಣಿ ಮಾರ್ಗದ ರಸ್ತೆ ಮುಂಬರುವ ದಿನಗಳಲ್ಲಿ ಚತುಷ್ಪಥ ರಸ್ತೆಯಾಗಲಿರುವುದರಿಂದ ಈಗಲೇ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ ಸೇರಿದಂತೆ ರಸ್ತೆಯ ಮೇಲೆ ಯಾವುದೇ ನೀರು ನಿಲ್ಲದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಸಂಸದ ಕೆ.ಹೆಚ್.ಮುನಿಯಪ್ಪ ಹೇಳಿದರು.
ಶಿಡ್ಲಘಟ್ಟ ತಾಲೂಕಿನ ಮೂಲಕ ಚಿಂತಾಮಣಿಗೆ ಹಾದು ಹೋಗುವ ರಾಜ್ಯ ಹೆದ್ದಾರಿ 234 ರ ರಸ್ತೆ ಕಾಮಗಾರಿಯ ವೀಕ್ಷಣೆಗಾಗಿ ಶನಿವಾರ ಸಂಜೆ ನಗರದ ಹೊರವಲಯದ ಪಂಪ್ ಹೌಸ್ ಮುಂಭಾಗ ಹಾಗು ತಾಲೂಕಿನ ವೈ ಹುಣಸೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದರು.
ಮುಂಬರುವ ದಿನಗಳಲ್ಲಿ ಈ ರಸ್ತೆ (ಚತುಷ್ಪತ) ನಾಲ್ಕು ಲೇನ್ ಗಳ ರಸ್ತೆಯಾಗಲಿದ್ದು ರಸ್ತೆಯ ಎರಡೂ ಕಡೆ ಗುಣಮಟ್ಟದ ಚರಂಡಿ ಸೇರಿದಂತೆ ಹಳ್ಳಿ ಹಳ್ಳಿಗೂ
ಬಸ್ ನಿಲ್ದಾಣದ ವ್ಯವಸ್ಥೆಯಾಗಲಿದೆ.
ಮುಂದಿನ ದಿನಗಳಲ್ಲಿ ಈ ರಸ್ತೆ ದೊಡ್ಡ ರಸ್ತೆಯಾಗಲಿದ್ದು ಮುಂಬಯಿ, ಹೈದರಾಬಾದ್, ಚೆನ್ನೈ ಹಾಗು ಉತ್ತರದ ಕೊಲ್ಕತ ಸೇರಿದಂತೆ ಮಹಾನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿ ರೂಪಗೊಳ್ಳಲಿದ್ದು ಆ ನಿಟ್ಟಿನಲ್ಲಿ ಈಗಾಗಲೇ ರಸ್ತೆ ಹಾದುಹೋಗುವ ಎಲ್ಲಾ ನಗರಗಳಲ್ಲಿಯೂ ಬೈಪಾಸ್ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದರು.
ಒಟ್ಟಾರೆ ಮುಂಬರುವ ದಿನಗಳಲ್ಲಿ ಅತ್ಯುತ್ತಮ ರಸ್ತೆಯಾಗಿ ರೂಪಗೊಳ್ಳಲಿರುವ ರಾಜ್ಯ ಹೆದ್ದಾರಿ 234 ರ ರಸ್ತೆ ಕಾಮಗಾರಿಯ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಎಲ್.ಮಧುಸೂದನ್, ಮುಖಂಡರಾದ ಟಿ.ಕೆ.ನಟರಾಜ್, ಆಶ್ರಯ ಸಮಿತಿ ಸದಸ್ಯ ನಾರಾಯಣಸ್ವಾಮಿ, ಡಿ.ಪಿ.ನಾಗರಾಜ್, ಕ್ಯಾತಪ್ಪ, ಆಂಜನೇಯರೆಡ್ಡಿ, ಬಾಲಕೃಷ್ಣ, ಮತ್ತಿತರರು ಹಾಜರಿದ್ದರು.