ನಗರದ ರೇಷ್ಮೆ ಗೂಡಿನ ಮಾರುಕಟ್ಟೆಗೆ ಶುಕ್ರವಾರ ಭೇಟಿ ನೀಡಿ ರೈತರು, ರೀಲರುಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದು ಸಂಸದ ಎಸ್.ಮುನಿಸ್ವಾಮಿ ಮಾತನಾಡಿದರು.
“ಒಂದು ಸಾವಿರ ಜನ ನಿಲ್ಲಲು ಎಲ್ರೀ ಜಾಗವಿದೆ, ಜನರು ಗುಂಪುಗೂಡಬಾರದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಎಲ್ಲೆಡೆ ಹೇಳುತ್ತಿದ್ದೇವೆ. ಆದರೆ ಅದನ್ನು ಆಚರಣೆಗೆ ತರದ ರೇಷ್ಮೆ ಗೂಡಿನ ಮಾರುಕಟ್ಟೆ ಅಪಾಯಕಾರಿ ಎಂದು ಕಂಡುಬರುತ್ತಿದೆ” ಎಂದು ಅವರು ತಿಳಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿ ಅವರೊಂದಿಗೆ ಚರ್ಚಿಸುತ್ತೇನೆ. ಒಂದು ಸಾವಿರಕ್ಕೂ ಹೆಚ್ಚು ಜನ ಸೇರುವುದರಿಂದ ಹೇಗೆ ತಾನೆ ಜನರನ್ನು ನಿಯಂತ್ರಿಸಲು ಸಾಧ್ಯವಿದೆ. ತಹಶೀಲ್ದಾರರು ಇಡಿ ತಾಲ್ಲೂಕನ್ನು ನಿಭಾಯಿಸಬೇಕು. ಆದರೆ ಇಲ್ಲಿನ ಸ್ಥಿತಿ ನೋಡಿದರೆ ರೇಷ್ಮೆ ಗೂಡಿನ ಮಾರುಕಟ್ಟೆಗೇ ಅವರನ್ನು ಸೀಮಿತಗೊಳಿಸುವಂತಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ಕೃಷಿ ಹಿತರಕ್ಷಣಾ ವೇದಿಕೆ ರಾಜ್ಯ ಸಂಚಾಲಕರ ಮಳ್ಳೂರು ಶಿವಣ್ಣ ಮಾತನಾಡಿ, “ಪ್ರತಿ ದಿನ ಎರಡರಿಂದ ಮೂರು ಸಾವಿರ ಜನ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ಸೇರುತ್ತಾರೆ. ಸಮಸ್ಯೆಗಳು ಇವೆ, ರೇಷ್ಮೆ ಬೆಳೆಗಾರರಿಗೆ ನಷ್ಟ ಆಗುತ್ತಿದೆ. ಆದರೆ ಎಲ್ಲರಿಗೂ ಅಧಿಕಾರಿಗಳು ರೀಲರುಗಳ ಸಂಪರ್ಕ ಮಾಡಿಸಿ ರೇಷ್ಮೆ ಗೂಡನ್ನು ಅವರ ಮನೆಗಳಿಗೇ ಹೋಗಿ ಮಾರಿ ಬರುವ ವ್ಯವಸ್ಥೆ ಒಂದು ವಾರ ಕಾಲ ನಡೆಯಿತು. ಆದರೆ ಮಾರುಕಟ್ಟೆ ತೆರೆದ ಕಾರಣ ಈಗ ಮತ್ತೆ ಸಾವಿರಾರು ಜನರು ಒಂದೆಡೆ ಸೇರುವ ಪ್ರಸಂಗ ಉಂಟಾಗಿದೆ. ಕೊರೊನಾ ವೈರಸ್ ಆಸ್ಫೋಟಗೊಂಡಲ್ಲಿ ಅದನ್ನು ಯಾರೂ ತಡೆಯಲಾಗದು ಮತ್ತು ಸಾಂಕ್ರಾಮಿಕವಾಗಿ ಹಬ್ಬಲು ರೇಷ್ಮೆ ಗೂಡಿನ ಮಾರುಕಟ್ಟೆ ರಹದಾರಿಯಾಗಲಿದೆ. ಶಿಡ್ಲಘಟ್ಟ ತಾಲ್ಲೂಕು ನಾಮಾವಶೇಷ ಆಗುತ್ತದೆ. ದಯಮಾಡಿ ಮಾರುಕಟ್ಟೆಯನ್ನು ಮುಚ್ಚಿಸಿ” ಎಂದು ವಿನಂತಿಸಿದರು.
ತಾಲ್ಲೂಕು ಸಿಲ್ಕ್ ರೀಲರ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್ ಹಾಗೂ ಕೆಲವು ರೀಲರುಗಳು ಹಾಗೂ ರೇಷ್ಮೆ ಬೆಳೆಗಾರರು ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ಮುಚ್ಚಿಸಿ, ಅಧಿಕಾರಿಗಳ ಮುಖಾಂತರ ರೇಷ್ಮೆ ಗೂಡನ್ನು ರೀಲರುಗಳಿಗೆ ಮಾರುವ ವ್ಯವಸ್ಥೆಯನ್ನು ಕೊರೊನಾ ಭೀತಿ ಕಡಿಮೆಯಾಗುವವರೆಗೂ ಮುಂದುವರೆಸುವಂತೆ ಕೋರಿದರು. ಸರ್ಕಾರದ ಕೆ.ಎಸ್.ಎಂ.ಬಿ ಮುಖಾಂತರ ಕಚ್ಚಾ ರೇಷ್ಮೆ ಖರೀದಿಸುವ ಮೂಲಕ ರೀಲರುಗಳಿಗೆ ನೆರವಾಗಬೇಕೆಂದು ಮನವಿ ಮಾಡಿದರು.
ಜಮಾತ್ ಸಮಾವೇಶ : ದಿಲ್ಲಿಯಲ್ಲಿ ನಡೆದ ತಬ್ಲಿಘಿ ಜಮಾತ್ ಸಮಾವೇಶದಲ್ಲಿ ಪಾಲ್ಗೊಂಡವರ ಬಗ್ಗೆ ಮಾಹಿತಿ ನೀಡುವಂತೆ ಸಂಸದ ಎಸ್.ಮುನಿಸ್ವಾಮಿ ಅವರು ಕೇಳಿದಾಗ, ತಹಶೀಲ್ದಾರ್ ಕೆ.ಅರುಂಧತಿಯವರು ಶಿಡ್ಲಘಟ್ಟ ತಾಲ್ಲೂಕಿನ ಇಬ್ಬರು ಹೋಗಿಬಂದಿದ್ದಾರೆ. ಆದರೆ ಅವರು ಸಮಾವೇಶದಲ್ಲಿ ಭಾಗಿಯಾಗಿಲ್ಲ, ವಿಮಾನದಲ್ಲಿ ವಾಪಸಾಗಿದ್ದಾರೆ ಎಂದರು. “ರೈಲಿನಲ್ಲಿ, ಲಾರಿಗಳಲ್ಲಿ ಬಂದವರ ಬಗ್ಗೆ ನಿಮ್ಮ ಬಳಿ ಮಾಹಿತಿ ಇದೆಯಾ. ಆಟೋದಲ್ಲಿ ಹಾಗೂ ಮುಸ್ಲೀಂ ಧಾರ್ಮಿಕ ಮುಖಂಡರಿಗೆ ತಿಳಿಸಿ. ಸಮಾವೇಶಕ್ಕೆ ಹೋಗಿ ಬಂದವರಿಂದ ಅವರ ಕುಟುಂಬ ನೆರೆಹೊರೆಯವರು, ಸಮಾಜವೇ ಸೋಂಕು ಪೀಡಿತರಾಗುತ್ತಾರೆ. ಮೊದಲೇ ತಿಳಿಸಿ ಸೂಕ್ತ ಚಿಕಿತ್ಸೆ ಪಡೆಯುವಂತೆ ಮನವರಿಕೆ ಮಾಡಿಕೊಡಿ ಎಂದರು.
ಗುಟ್ಕಾ ಪ್ಯಾಕೆಟ್ ಸುಡಿ : ತೋಟಕ್ಕೆ ಪೌಷಧಿ ಸಿಂಪಡಿಸುವ ಟ್ರಾಕ್ಟರ್, ಅಗ್ನಿಶಾಮಕದಳದ ವಾಹನ, ಎಲ್ಲವನ್ನೂ ಬಳಸಿಕೊಂಡು ಸೋಂಕು ನಿವಾರಕಗಳನ್ನು ನಗರದೆಲ್ಲೆಡೆ ಸಿಂಪಡಿಸುತ್ತಿರಿ. ಗುಟ್ಕಾ ಮಾರಾಟ ಹೆಚ್ಚಿರುವ ದೂರು ಬಂದಿದೆ. ಧಾಳಿ ಮಾಡಿ ವಶಪಡಿಸಿಕೊಂಡಿದ್ದನ್ನು ಸುಟ್ಟುಹಾಕಿ ಎಂದು ಸಂಸದ ಎಸ್.ಮುನಿಸ್ವಾಮಿ ನಗರಸಭೆ ಪೌರಾಯುಕ್ತ ತ್ಯಾಗರಾಜ್ ಅವರಿಗೆ ತಿಳಿಸಿದರು.
ರೇಷ್ಮೆ ಗೂಡಿನ ಮಾರುಕಟ್ಟೆ ಉಪನಿರ್ದೇಶಕ ಸುಭಾಷ್ ಸಾತೇನಹಳ್ಳಿ, ತಾಲ್ಲೂಕು ಪಂಚಾಯಿತಿ ಇಒ ಶಿವಕುಮಾರ್ ಹಾಜರಿದ್ದರು.
- Advertisement -
- Advertisement -
- Advertisement -