Home News ರೇಷ್ಮೆ ಗೂಡಿನ ಮಾರುಕಟ್ಟೆಯ ರಸ್ತೆ ದುರವಸ್ಥೆ

ರೇಷ್ಮೆ ಗೂಡಿನ ಮಾರುಕಟ್ಟೆಯ ರಸ್ತೆ ದುರವಸ್ಥೆ

0

ನಗರದ ಪ್ರಸಿದ್ಧ ರೇಷ್ಮೆ ಗೂಡಿನ ಮಾರುಕಟ್ಟೆಗೆ ಹೋಗುವ ರಸ್ತೆ ಅಕ್ಷರಶಃ ಅಪಘಾತದ ತಾಣವಾಗಿ ಪರಿಣಮಿಸಿದೆ. ಕೋಟ್ಯಾಂತರ ರೂಪಾಯಿಗಳ ಆದಾಯವನ್ನು ರೇಷ್ಮೆ ಗೂಡಿನ ಮಾರುಕಟ್ಟೆಯನ್ನು ತಂದುಕೊಡುತ್ತಿದ್ದರೂ ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗಮನ ಹರಿಸದೆ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.
19nov3ಕೆಲ ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ರೇಷ್ಮೆ ಗೂಡಿನ ಮಾರುಕಟ್ಟೆಗೆ ಹೋಗುವ ರಸ್ತೆಯಲ್ಲಿನ ಗುಂಡಿಗಳು ನೀರಿನಿಂದ ಆವೃತ್ತವಾಗಿದ್ದರೆ, ಉಳಿದ ಸ್ಥಳವೆಲ್ಲಾ ರೊಚ್ಚಿನಿಂದ ಕೂಡಿದ್ದು, ನಡೆದು ಹೋಗುವವರೇ ಜಾರಿ ಬೀಳುತ್ತಿದ್ದಾರೆ. ರೇಷ್ಮೆ ಗೂಡನ್ನು ತಲೆಯ ಮೇಲೆ ಹೊತ್ತುಕೊಂಡು ಸೈಕಲ್ ತುಳಿಯುತ್ತಾ ಸಾಗುವ ಹಮಾಲಿ ಕಾರ್ಮಿಕರಿಗೆ ಈ ರಸ್ತೆಯು ನರಕಸದೃಶವಾಗಿದೆ. ಎರಡು ಮೂರು ದಿನಗಳಿಂದ ಹಲವು ಮಂದಿ ದ್ವಿಚಕ್ರ ವಾಹನ ಸವಾರರು ಬಿದ್ದಿದ್ದಾರೆ. ರೇಷ್ಮೆ ಗೂಡಿನ ಮೂಟೆ ಕೆಳಗೆ ಬಿದ್ದರೆ ಸಾವಿರಾರು ರೂಗಳು ಒಮ್ಮೆಗೇ ನಷ್ಟವಾಗುತ್ತದೆ. ಕೆಳಗೆ ಬಿದ್ದವರನ್ನು ಉಪಚರಿಸುವುದು ಹಾಗೂ ಅಧಿಕಾರಿಗಳಿಗೆ ಶಾಪ ಹಾಕುವುದು ನಮ್ಮ ಕೆಲಸವಾಗಿದೆ ಎನ್ನುತ್ತಾರೆ ಅಂಗಡಿ ಮಾಲಿಕ ಮಂಜುನಾಥ.
ಇದೇ ರಸ್ತೆಯಲ್ಲಿ ಮೂರು ಬ್ಯಾಂಕುಗಳು, ಹಲವು ಹೋಟೆಲ್ಗಳು ಹಾಗೂ ಸಾಕಷ್ಟು ಅಂಗಡಿಗಳಿವೆ. ಮಾರುಕಟ್ಟೆಗೆ ಆಗಮಿಸುವ ಸಾವಿರಾರು ಮಂದಿಗೆ ಇಷ್ಟು ತೊಂದರೆಯಾದರೂ ಯಾರೂ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ಕೆಲ ತಿಂಗಳ ಹಿಂದೆ ರಾಜ್ಯ ರೈತ ಸಂಘದ ಸದಸ್ಯರು ಈ ರಸ್ತೆಯನ್ನು ಸರಿಪಡಿಸುವಂತೆ ಪ್ರತಿಭಟನೆ ನಡೆಸಿದ್ದಾಗ, ಆಗಿನ ಪುರಸಭೆ ಮುಖ್ಯಾಧಿಕಾರಿ ಮೂರು ತಿಂಗಳೊಳಗೆ ರಸ್ತೆಯನ್ನು ಸರಿಪಡಿಸುವುದಾಗಿ ಹಿಂಬರಹ ಕೊಟ್ಟಿದ್ದರು. ಆದರೆ ಈ ರಸ್ತೆ, ಇಲ್ಲಿನ ದುರವಸ್ಥೆ, ಅಪಘಾತ, ತೊಂದರೆ ಮುಂದುವರೆದಿದೆ. ಈ ರಸ್ತೆಯ ಮೇಲಿನ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ವ್ಯವಸ್ಥೆಯನ್ನು ರೂಪಿಸಬೇಕಿದೆ. ನಗರಸಭೆಯಾಗಿರುವುದರಿಂದ ಅಧಿಕಾರಿಗಳನ್ನು ಎಚ್ಚರಿಸಲು ರಾಜ್ಯ ರೈತ ಸಂಘದ ವತಿಯಿಂದ ಮತ್ತೊಮ್ಮೆ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ತಾದೂರು ಮಂಜುನಾಥ್ ತಿಳಿಸಿದರು.