Home News ರೇಷ್ಮೆ ಬೆಳೆಗಾರರು ಖಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು

ರೇಷ್ಮೆ ಬೆಳೆಗಾರರು ಖಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು

0

ರೇಷ್ಮೆ ಬೆಳೆಗಾರರು ಖಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಹಣ ಹಾಗೂ ಶ್ರಮದ ಉಳಿತಾಯ ಮಾಡಿಕೊಳ್ಳುವ ಮೂಲಕ ರೇಷ್ಮೆ ಕೃಷಿಯಲ್ಲಿ ಪ್ರಗತಿಯನ್ನು ಸಾಧಿಸಬಹುದಾಗಿದೆ ಎಂದು ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಇ.ಮುನಿರಾಜು ತಿಳಿಸಿದರು.
ನಗರದ ದಿಬ್ಬೂರಹಳ್ಳಿ ಬೈಪಾಸ್‌ ರಸ್ತೆಯಲ್ಲಿ ಕೀರಣಗೆರೆ ಚಾಕಿ ಸಾಕಾಣಿಕಾ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ರೈತರಿಗೆ ರೋಗರಹಿತ ಹುಳುಗಳನ್ನು ನೀಡುವ ನಿಟ್ಟಿನಲ್ಲಿ ಹಲವಾರು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಗುಣಾತ್ಮಕ ಬೆಳೆಗಳನ್ನು ರೈತರು ಬೆಳೆಯಬೇಕೆಂದು ಚಾಕಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ರೇಷ್ಮೆ ಬೆಳೆಗಾರರಿಗೆ ವೈಜ್ಞಾನಿಕ ಹುಳು ಸಾಕಾಣಿಕೆಯ ಕುರಿತಂತೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯ ಬಗ್ಗೆ ತರಬೇತಿಯನ್ನು ಆಯೋಜಿಸಲಾಗುವುದು ಎಂದು ಹೇಳಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೀರಣಗೆರೆ ಜಗದೀಶ್‌ ಮಾತನಾಡಿ, ರೇಷ್ಮೆ ಬೆಳೆಗಾರರು ಸರಳ ರೀತಿಯಲ್ಲಿ ಹುಳುಗಳನ್ನು ಮೇಯಿಸುವ ವ್ಯವಸ್ಥೆಯನ್ನು ರೂಢಿಸಿಕೊಳ್ಳಬೇಕು. 6, 7 ಮತ್ತು 8 ಹಂತಗಳ ಸ್ಟಾಂಡ್‌ ಬದಲು ಎರಡು ಸ್ಟಾಂಡ್‌ ಬಳಸಿ, ಯಂತ್ರೋಪಕರಣವನ್ನು ಬಳಸಿಕೊಳ್ಳಿ, ಎರಡನೇ ಹಂತದ ಹುಳು ಪಡೆಯುವ ಬದಲಾಗಿ ಮೂರನೇ ಹಂತದ ಹುಳುಗಳನ್ನು ಪಡೆದು ಬೆಳೆಸುವುದು ಲಾಭದಾಯಕವಾಗಲಿದೆ. ಹೆಚ್ಚು ಆದಾಯ ಗಳಿಕೆ, ಶ್ರಮ ಕಡಿಮೆ, ಖರ್ಚಿನಲ್ಲಿ ಉಳಿತಾಯ ಮತ್ತು ಯಂತ್ರಗಳ ಬಳಕೆಯನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯ್ತಿ ರೇಷ್ಮೆ ಉಪನಿರ್ದೇಶಕ ನಾಗಭೂಷಣ್‌ ಮಾತನಾಡಿ, ಸರ್ಕಾದಿಂದ ಸಿಗುವ ಸೌಲಭ್ಯಗಳ ಕುರಿತು ವಿವರ ನೀಡಿದರು. ಸೊಪ್ಪು ಕಟಾವು ಯಂತ್ರ, ದುಂಪೆ ಕಟಾವು ಯಂತ್ರ ಹಾಗೂ ಇತರ ವೈಜ್ಞಾನಿಕ ಸಲಕರಣೆಗಳನ್ನು ಸರ್ಕಾರದಿಂದ ಕಡಿಮೆ ದರಕ್ಕೆ ಕೊಡಿಸಬೇಕೆಂಬ ರೈತರ ಬೇಡಿಕೆಗೆ ಅವರು ಪ್ರಸ್ತಾವನೆಯನ್ನು ಸಲ್ಲಿಸುವುದಾಗಿ ಹೇಳಿದರು.
ರೈತ ಸಂಘದ ಜಿಲ್ಲಾ ಅಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಪ್ರಗತಿಪರ ರೈತ ಹಿತ್ತಲಹಳ್ಳಿ ಗೋಪಾಲಗೌಡ, ಸಹಾಯಕ ರೇಷ್ಮೆ ಕೃಷಿ ನಿರ್ದೇಶಕ ಬೋಜಣ್ಣ, ವಿಸ್ತರಣಾಧಿಕಾರಿ ನಾರಾಯಣಸ್ವಾಮಿ, ಬೋದಗೂರು ನಾರಾಯಣಸ್ವಾಮಿ, ಭಕ್ತರಹಳ್ಳಿ ಲಕ್ಷ್ಮೀನಾರಾಯಣ, ದೊಡ್ಡದಾಸರಹಳ್ಳಿ ಎಂ.ಶ್ರೀನಿವಾಸ್‌ ಹಾಜರಿದ್ದರು.
 

error: Content is protected !!