Home News ರೈತಮಿತ್ರ ಅಧಿಕಾರಿಗೆ ಬೀಳ್ಕೊಡುಗೆ

ರೈತಮಿತ್ರ ಅಧಿಕಾರಿಗೆ ಬೀಳ್ಕೊಡುಗೆ

0

ರೈತಮಿತ್ರ ಅಧಿಕಾರಿಯಾಗಿ ರೇಷ್ಮೆ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುವ ಜೊತೆಗೆ ಇಲಾಖೆಯ ಸೌಲಭ್ಯಗಳನ್ನು ಒದಗಿಸಿ ರೈತರ ಅಭಿವೃದ್ಧಿಗೆ ಕಾರಣರಾಗಿದ್ದ ಎಂ.ಸಿ.ಚಂದ್ರಪ್ಪ ಅವರ ಸೇವೆ ಈ ತಾಲ್ಲೂಕಿಗೆ ಮತ್ತಷ್ಟು ಬೇಕಾಗಿತ್ತು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ತಿಳಿಸಿದರು.
ನಗರದ ರೇಷ್ಮೆ ಬಿತ್ತನೆ ಕೋಠಿಯಲ್ಲಿ ಬುಧವಾರ ತಾಲ್ಲೂಕಿನ ರೇಷ್ಮೆ ಇಲಾಖೆಯಲ್ಲಿ 17 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ರೇಷ್ಮೆ ಸಹಾಯಕ ನಿರ್ದೇಶಕ ಎಂ ಸಿ ಚಂದ್ರಪ್ಪ ಅವರಿಗೆ ರೇಷ್ಮೆ ಇಲಾಖೆ, ಮೈರಾಡ ಸಂಸ್ಥೆ, ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿ,ರೇಷ್ಮೆ ಬೆಳೆಗಾರರು ಹಾಗೂ ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಾಲ್ಲೂಕಿನಲ್ಲಿ ಹೆಚ್ಚಿನ ರೈತರು ರೇಷ್ಮೆಯನ್ನು ಅವಲಂಬಿತರು. ರೇಷ್ಮೆ ಬೆಳೆಗಾರರು ಆರ್ಥಿಕವಾಗಿ ರೈತರು ಮುಂದುವರಿಯಲು ಕಾರಣರಾದ ಚಂದ್ರಪ್ಪ ಅವರು ಅತ್ಯುತ್ತಮ ಮಾರ್ಗದರ್ಶಕರಾಗಿದ್ದರು. ನೂತನ ಅಧಿಕಾರಿಗಳು ಸಹ ಅವರಂತೆಯೇ ಕಾರ್ಯನಿರ್ವಹಿಸಿ ಉತ್ತಮ ಹೆಸರುಗಳಿಸಬೇಕೆಂದು ಕೋರಿದರು.
ಸರ್ಕಾರಿ ನೌಕರರಿಗೆ ವರ್ಗಾವಣೆ ಮತ್ತು ನಿವೃತ್ತಿ ಸರ್ವೇ ಸಾಮಾನ್ಯ. ಈ ಮಧ್ಯೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗುವುದು ಬಹಳ ಮುಖ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ರೈತ ಕೂಟಗಳ ಸದಸ್ಯರು, ಮೈರಾಡ ಸಂಸ್ಥೆ, ಶಿಡ್ಲಘಟ್ಟ ರೇಷ್ಮೆ ರೈತ ಉತ್ಪಾದಕ ಕಂಪನಿ,ರೇಷ್ಮೆ ಬೆಳೆಗಾರರು ಮತ್ತಿತರರು ರೇಷ್ಮೆ ಸಹಾಯಕ ನಿರ್ದೇಶಕ ಎಂ ಸಿ ಚಂದ್ರಪ್ಪ ಅವರನ್ನು ಸನ್ಮಾನಿಸಿದರು.
ಚಂದ್ರಪ್ಪ ಅವರಿಂದ ತೆರವಾದ ಸ್ಥಾನಕ್ಕೆ ಜವಾಬ್ದಾರಿ ವಹಿಸಿದ ಭೋಜಣ್ಣ, ರೇಷ್ಮೆ ಸಹಾಯಕ ನಿರ್ದೇಶಕರಿಗೆ ರೇಷ್ಮೆ ಇಲಾಖೆ ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಸ್ವಾಗತವನ್ನು ಕೋರಿದರು.
ರೇಷ್ಮೆ ಇಲಾಖೆಯ ಅಧಿಕಾರಿಗಳಾದ ನಾಗಭೂಷಣ್‌, ನಾರಾಯಣಸ್ವಾಮಿ, ರತ್ನಯ್ಯಶೆಟ್ಟಿ, ಗುರುರಾಜರಾವ್‌, ರೈತರಾದ ಎಚ್‌.ಜಿ.ಗೋಪಾಲಗೌಡ, ಎಸ್‌.ಎಂ.ನಾರಾಯಣಸ್ವಾಮಿ, ವೆಂಕಟಸ್ವಾಮಿರೆಡ್ಡಿ, ಸುರೇಶ್‌, ವೆಂಕಟರೆಡ್ಡಿ ಗಿರಣಿ, ರವಿಪ್ರಕಾಶ್‌ ಹಾಜರಿದ್ದರು.